ಪ್ರೇಮಿ ಜತೆ ಸೇರಿ ಹೆತ್ತ ಮಗುವಿಗೆ ಸ್ಪೂನ್​ನಿಂದ ಬರೆ ಹಾಕುತ್ತಿದ್ದ ತಾಯಿ!

>

ಹೈದರಾಬಾದ್​: ಹೆತ್ತ ತಾಯಿ ಮತ್ತು ಆಕೆಯ ಪ್ರೇಮಿಯಿಂದ ಚಿತ್ರಹಿಂಸೆಗೊಳಗಾಗಿದ್ದ ನಾಲ್ಕು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೋಮವಾರ ರಕ್ಷಿಸಿದ್ದಾರೆ.

ತಾಯಿಯೇ ಮಗುವಿಗೆ ನೀಡುತ್ತಿರುವ ಚಿತ್ರಹಿಂಸೆ ಕುರಿತು ನೆರೆ ಮನೆಯವರು ಸ್ಥಳೀಯ ಶಾಸಕ ಮತ್ತು ಎನ್​ಜಿಒಗೆ ತಿಳಿಸುತ್ತಾರೆ. ನಂತರ ಶಾಸಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿ ಮಗುವನ್ನು ನರಕದಿಂದ ಪಾರು ಮಾಡಿದ್ದಾರೆ.

ಕಾಯಿಸಿದ ಸ್ಪೂನ್​ನಿಂದ ಬರೆ
ಅಪ್ಪ ನನಗೆ ಹೊಡೆದು ನಂತರ ಬಿಸಿಯಾದ ಸ್ಪೂನ್​ನನ್ನು ನನ್ನ ಮೇಲೆ ಒತ್ತಿ ಹಿಡಿಯುತ್ತಿದ್ದರು ಎಂದು ಸಂತ್ರಸ್ತ ಮಗು ತಾಯಿ ಹಾಗೂ ಆಕೆಯ ಪ್ರಿಯಕರ ನೀಡುತ್ತಿದ್ದ ಚಿತ್ರಹಿಂಸೆ ಬಗ್ಗೆ ಹೇಳಿಕೊಂಡಿದೆ.

ಮಗುವನ್ನು ನಾನೇ ನೋಡಿಕೊಳ್ಳುತ್ತೇನೆ
ಪ್ರಕರಣ ಕುರಿತು ಮಾತನಾಡಿರುವ ಸ್ಥಳೀಯ ಶಾಸಕ, “ಮಗುವಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾರೆ. ಸಂತ್ರಸ್ತ ಮಗುವನ್ನು ಮೊದಲು ನೋಡಿದಾಗ ಅದರ ದೇಹದ ಆಕಾರವೇ ಬದಲಾಗಿತ್ತು . ಮಗುವಿನ ಸ್ಥಿತಿ ನೋಡಿದ ನಂತರ ಇನ್ನುಮುಂದೆ ನಾನೇ ಆಕೆಯ ಶಿಕ್ಷಣ ಹಾಗೂ ಇನ್ನಿತರ ವೆಚ್ಚ ಭರಿಸಬೇಕೆಂದು ತೀರ್ಮಾನಿಸಿದ್ದೇನೆ” ಎಂದಿದ್ದಾರೆ.

ತಾಯಿ ಮತ್ತು ಆಕೆಯ ಪ್ರೇಮಿ ನಡುವೆ ಇರುತ್ತಿದ್ದ ಭಿನ್ನಾಭಿಪ್ರಾಯ ಹಾಗೂ ಕೋಪವನ್ನು ಇಬ್ಬರೂ ಆ ಮಗುವಿನ ಮೇಲೆ ತೀರಿಸಿಕೊಳ್ಳುತ್ತಿದ್ದರು ಎಂದು ಪೊಲೀಸ್​ ತನಿಖೆ ವೇಳೆ ತಿಳಿದುಬಂದಿದೆ.

ಮೂಸಾರಾಮ್​ಭಾಗ್​ ನಿವಾಸಿಯಾಗಿರುವ ಮಗುವಿನ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ಪ್ರಿಯಕರ ತಪ್ಪಿಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)