ಮಲ್ಲಿಗೆ ನಾಡಿನ ಹೃದಯವಂತ ಮಾಜಿ ಶಾಸಕ ಎಂ.ಪಿ.ರವೀಂದ್ರ ಇನ್ನಿಲ್ಲ

ಹೂವಿನಹಡಗಲಿ (ಬಳ್ಳಾರಿ): ಮಲ್ಲಿಗೆ ನಾಡಿನ ಹೃದಯವಂತ ಮಾಜಿ ಶಾಸಕ ಎಂ.ಪಿ.ರವೀಂದ್ರ (49) ಶನಿವಾರ ಬೆಳಗ್ಗೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ರ ಪುತ್ರ ಎಂ.ಪಿ.ರವೀಂದ್ರ, ತಮ್ಮ ಕುಟುಂಬದ ಮೂರನೇ ಪೀಳಿಗೆ ವಾರಸುದಾರ ಆಗಿದ್ದರು. ಎಂ.ಪಿ.ಪ್ರಕಾಶ್‌ರು ಗೃಹಮಂತ್ರಿ, ಡಿಸಿಎಂ ಆದರೂ ತಂದೆಯಂತೆ ಇವರೂ ವಿನಯಶೀಲ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ರವೀಂದ್ರರನ್ನು ಮಲೆನಾಡು ಭಾಗದ ಹರಿಣಿ, ಪತಿಯಾಗಿ ಸ್ವೀಕರಿಸಿದ್ದರು.

ಅವರ ಮನೆತನದ ಕಾರ್ಯಗಳು ಕೇವಲ ಹೂವಿನ ಹಡಗಲಿಗೆ ಮಾತ್ರ ಸೀಮಿತವಾಗಿದ್ದಿಲ್ಲ. ಬಳ್ಳಾರಿ ಜಿಲ್ಲೆ ವ್ಯಾಪ್ತಿ ಮೀರಿ ಇಡೀ ರಾಜ್ಯವನ್ನು ವ್ಯಾಪಿಸಿದ್ದವು. ಈ ಕಾರಣದಿಂದಲೇ ಹೂವಿನಹಡಗಲಿಗೆ ತನ್ನ ಐತಿಹಾಸಿಕ ಮಹತ್ವದ ಜತೆಗೆ ವರ್ತಮಾನಕಾಲದಲ್ಲೂ ತನ್ನತನ ಮೆರೆಯುತ್ತಿದೆ.

ರವೀಂದ್ರರು 1994ರಿಂದ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡರು. ಜತೆಗೆ ತಾಲೂಕು, ಜಿಲ್ಲಾಮಟ್ಟದಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆ ಸಂಘಟಿಸಿದರು. ಮಾಜಿ ಸಿಎಂ ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ, ರವೀಂದ್ರಗೆ ಸ್ನೇಹಿತರಾಗಿದ್ದರಿಂದ ಕೆಲಕಾಲ ಚಲನಚಿತ್ರ ರಂಗದಲ್ಲೂ ತೊಡಗಿದ್ದರು. ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಾಲೂಕಿನಲ್ಲಿ ಅರ್ಬನ್ ಬ್ಯಾಂಕ್ ರೂಪಿಸಿದ್ದಾರೆ. ಅದರ ಮೊದಲ ನಿರ್ದೇಶಕರಾಗಿ, ಅಧ್ಯಕ್ಷರಾಗೂ ಸೇವೆ ಸಲ್ಲಿಸಿದ್ದಾರೆ. ಜತೆಗೆ ರಂಗಭಾರತಿ ಕಾರ್ಯಾಧ್ಯಕ್ಷ, ಹೊಸಪೇಟೆ ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ, ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸಮಾನ ದೃಷ್ಟಿಕೋನ ಹೊಂದಿರುವ ರವೀಂದ್ರರು ರಾಜಕೀಯದಷ್ಟೇ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಆರೋಗ್ಯ ಶಿಕ್ಷಣ ಸೇರಿ ಹಲವು ರಂಗಗಳಿಗೆ ಮಾನ್ಯತೆ ಕೊಡುತ್ತಾ ಬಂದಿದ್ದಾರೆ.

1969ರ ಏ.5 ರಂದು ಜನಿಸಿದ ಇವರು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಮೈಸೂರಲ್ಲಿ ವಿದ್ಯಾಭ್ಯಾಸ ಮಾಡಿದರು. ಬಿಇ, ಸಿವಿಲ್ ಪದವೀಧರರು ಆಗಿದ್ದರು. 2003ರಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ರವೀಂದ್ರ, ನಾಲ್ಕು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಸಹಕಾರ ಸಂಘದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಹೈನುಗಾರಿಕೆಯಲ್ಲೂ ಅಭಿರುಚಿ ಹೊಂದಿದ್ದ ರವೀಂದ್ರ ಕೆಎಂಎಫ್ ನಿರ್ದೇಶಕರಾಗಿ, ನಂತರ ಅಧ್ಯಕ್ಷರಾಗಿ ಆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬೇಕೆಂಬ ಅವರ ಕನಸು ಹಾಗೆ ಉಳಿಯಿತು.

ಕ್ಷೇತ್ರಗಳ ಮರುವಿಂಗಡಣೆಯಿಂದಾಗಿ ಹೂವಿನಹಡಗಲಿ ಕ್ಷೇತ್ರವು ಪಜಾತಿಗೆ ಮೀಸಲಾಗಿದ್ದರಿಂದ ಹರಪನಹಳ್ಳಿ ಸಾಮಾನ್ಯ ಕ್ಷೇತ್ರಕ್ಕೆ 2008ರ ವಿಧಾನಸಭಾ ಚುನಾವಣೆಯಲ್ಲಿ ಎಂ.ಪಿ.ಪ್ರಕಾಶ್ ಸ್ಪರ್ಧಿಸಿ ಪರಭಾವಗೊಂಡಿದ್ದರು. ಪ್ರಕಾಶ್‌ರ ಮರಣದ ನಂತರ 2013ರ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರರವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕರುಣಾಕರರೆಡ್ಡಿ ವಿರುದ್ಧ ಜಯಗಳಿಸಿದ್ದರು. ಅದರಲ್ಲೂ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸಿ, 371 (ಜೆ) ಕಲಂ ವ್ಯಾಪ್ತಿಗೆ ಒಳಪಡುವಂತಾಗಲು ನಿರಂತರ ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನೀರವ ಮೌನ: ಎಂ.ಪಿ.ರವೀಂದ್ರರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶನಿವಾರ ಬೆಳಗ್ಗೆ ಪಟ್ಟಣ ಸೇರಿ ತಾಲೂಕಾದ್ಯಂತ ನೀರವಮೌನ ಆವರಿಸಿತ್ತು. ಬೆಳಗ್ಗೆಯಿಂದಲೇ ಸ್ವಯಂಘೋಷಿತವಾಗಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಲೋಕಸಭಾ ಉಪಚುನಾವಣೆ ಮತದಾನ ಇದ್ದುದ್ದರಿಂದ ಮತದಾನವೂ ಮಂದಗತಿಯಲ್ಲಿ ನಡೆಯಿತು.

ಎಂಪಿಪಿ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ: ಹೂವಿನಹಡಗಲಿಯಲ್ಲಿ ಭಾನುವಾರ ಬೆಳಗ್ಗೆ 9 ರಿಂದ 11 ಗಂಟೆ ವರೆಗೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಗುವುದು. ನಂತರ 12 ಗಂಟೆಗೆ ಎಂ.ಪಿ.ಪ್ರಕಾಶ್ ಸಮಾಧಿ ಪಕ್ಕದಲ್ಲಿ ವೀರಶೈವ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಲಿದೆ.