ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ

ಹೂವಿನಹಿಪ್ಪರಗಿ: ಕ್ರೀಡಾಕೂಟಗಳ ಆಯೋಜನೆ ಸಂದರ್ಭ ಮಾತ್ರ ಕ್ರೀಡೆಗಳನ್ನು ನೆನಪಿಸಿಕೊಳ್ಳದೆ ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಿಗಿಕೊಳ್ಳುವ ಮೂಲಕ ಮಾನಸಿಕ, ದೈಹಿಕವಾಗಿ ಸದೃಢರಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ಗ್ರಾಮದ ವಿಶ್ವಚೇತನ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇವಲ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಾಗ ಮಾತ್ರ ಪಾಲಕರು ಹೆಮ್ಮೆ ಪಡದೆ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದಾಗಲೂ ಹೆಮ್ಮೆ ಪಡಬೇಕು. ಕ್ರೀಡೆಯಿಂದ ಬದುಕಿನಲ್ಲಿ ಬರುವ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯ ಬರುತ್ತದೆ. ಪಠ್ಯ, ಪಠ್ಯೇತರ ಹಾಗೂ ಪಠ್ಯ ಪೂರಕ ಚಟುವಟಿಕೆಗಳೆಂಬ ಕಲ್ಪನೆ ಹೊಡೆದು ಹಾಕಬೇಕೆಂಬ ವಿಚಾರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಎಂದು ಹೇಳಿದರು.
ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರನ್ನು ಪರಿಗಣಿಸುವ ಕಾಲ ಸನ್ನಿಹಿತವಾಗುತ್ತಿದೆ. ಕಾಲ್ಪನಿಕ ವೇತನ ಬಡ್ತಿ ಪರ ಕಾರ್ಯ ಆರಂಭ ಮಾಡುತ್ತೇವೆ. ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಬಿಇಒ ಮಂಜುನಾಥ ಗುಳೇದಗುಡ್ಡ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 7 ವಲಯಗಳ 78 ಪ್ರೌಢಶಾಲೆಗಳ 546 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. 173 ಕ್ರೀಡಾಪಟುಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ನಿರ್ಣಾಯಕರು ಉತ್ತಮ ಆಟಗಾರರನ್ನು ಗುರುತಿಸುವ ಕಾರ್ಯ ಮಾಡಿದರೆ ಅವರು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಲಿದ್ದಾರೆ ಎಂದರು.
ವಿಶ್ವಚೇತನ ಪ್ರೌಢಶಾಲೆ ಪ್ರಧಾನ ಕಾರ್ಯದರ್ಶಿ ಎಸ್.ಎಂ. ನಾಡಗೌಡ, ನಿರ್ದೇಶಕ ಜಿ.ಬಿ. ಬಾಗೇವಾಡಿ ಮಾತನಾಡಿದರು.
ತಾಪಂ ಸದಸ್ಯೆ ಶಾಂತಮ್ಮಗೌಡತಿ ಬಿರಾದಾರ ಕ್ರೀಡಾಜ್ಯೋತಿ ಸ್ವೀಕರಿಸಿದರು. ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಲಚ್ಯಾಣ, ಬಿ.ಜಿ. ನಾಡಗೌಡ, ಎಲ್.ಪಿ. ಚೌದ್ರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿ. ಗಂಗಶೆಟ್ಟಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ. ಹಬ್ಬಾಳ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಮಂಗಾನವರ, ಡಿ.ಬಿ. ಹೆಬ್ಬಾಳ, ಐ.ಸಿ. ಬಡಿಗೇರ, ನಾಗೇಶ ಡೋಣೂರ, ಬಿ.ಎಂ. ಪಾಟೀಲ, ಎಸ್. ವೈ.ಶಿವಯೋಗಿ, ಸಂಗಮೇಶ ಗುಂಡಳ್ಳಿ, ಡಾ. ಅರವಿಂದ ಕೋಲಕಾರ, ಪುಂಡಲೀಕ್ ನಾಯ್ಕೋಡಿ, ಸಂತೋಷಕುಮಾರ ತೆಲಗಿ, ಅನಿಲ ಕುಂಬಾರ ಇದ್ದರು.
ರಮೇಶ ತೋಟದ ಸ್ವಾಗತಿಸಿದರು. ಆರ್. ಸಿ. ಪಾಟೀಲ ನಿರೂಪಿಸಿದರು.

Leave a Reply

Your email address will not be published. Required fields are marked *