ರಿಪೇರಿ ಮಾಡಿ ನೀರು ಹರಿಸಿ

ಹೂವಿನಹಿಪ್ಪರಗಿ: ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಸಂಕನಾಳ ಗ್ರಾಮದ ರೈತರು ಸ್ಥಳೀಯ ಪತ್ರಿವನ ಮಠದಿಂದ ಬಂಡಿಗಳೊಂದಿಗೆ ಗುರುವಾರ ಪ್ರತಿಭಟನಾ ರ‍್ಯಾಲಿ ಆರಂಭಿಸಿ ಉಪ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮಾಡಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜ.1 ರಂದು ರೈತರು ನಡೆಸಿದ ಧರಣಿ ಸಂದರ್ಭದಲ್ಲಿ ತಹಸೀಲ್ದಾರ್ ಹಾಗೂ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಧರಣಿ ಸ್ಥಳಕ್ಕೆ ಭೇಟಿ ನೀಡಿ 10 ದಿನದೊಳಗೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಡೀ ವಿಜಯಪುರ ಜಿಲ್ಲೆಗೆ ನೀರು ಹರಿಸುವ ಜಾಕ್ವೆಲ್ ಸಂಪೂರ್ಣ ಸುಟ್ಟಿದ್ದರೂ ಅಧಿಕಾರಿಗಳು ಸತ್ಯಾಂಶ ಮುಚ್ಚಿಟ್ಟು ಧರಣಿ ಸಂದರ್ಭದಲ್ಲಿ 10 ದಿನದೊಳಗೆ ನೀರು ಕೊಡುವುದಾಗಿ ನಂಬಿಸಿ ನೂರಾರು ರೈತರನ್ನು ಮೋಸಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

15 ದಿನಗಳಲ್ಲಿ ರಿಪೇರಿ ಅಥವಾ ಹೊಸ ಮಷಿನ್​ಗಳನ್ನು ಅಳವಡಿಸಿ ರೈತರಿಗೆ ನೀರು ಒದಗಿಸಲು ಸಾಧ್ಯವಿದೆ. ಆದರೆ ರೈತರಿಗೆ ಏನೂ ತಿಳಿಯುವುದಿಲ್ಲವೆಂಬ ಹುನ್ನಾರದಿಂದ ಬೇಕಂತಲೇ ರಿಪೇರಿಗೆ 4 ತಿಂಗಳು ಬೇಕೆಂದು ಹೇಳುತ್ತಿದ್ದಾರೆ. ರೈತರ ಬೇಡಿಕೆಗಳು ಈಡೇರದಿದ್ದರೆ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹಾಗೂ ಕೆಬಿಜೆಎನ್​ಎಲ್ ಅಧಿಕಾರಿಗಳಿಗೆ ಅಖಂಡ ಕರ್ನಾಟಕ ರೈತ ಸಂಘ ಪದಾಧಿಕಾರಿಗಳು ಹಾಗೂ ಸಮಸ್ತ ರೈತರು ಎಚ್ಚರಿಕೆ ನೀಡಿದರು.

ಧರಣಿ ಸ್ಥಳಕ್ಕೆ ಜಿಪಂ ಸದಸ್ಯ ಶಿವಾನಂದ ದೇಸಾಯಿ ಭೇಟಿ ನೀಡಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸಲು ಸಂಬಂಧಿತ ಅಧಿಕಾರಿಗಳು, ಸಚಿವರು ಹಾಗೂ ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗನೆ ಕೆರೆಗಳಿಗೆ ನೀರು ಹರಿಸುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ತಾಲೂಕು ಗೌರವಾಧ್ಯಕ್ಷ ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಹೂವಿನಹಿಪ್ಪರಗಿ ಘಟಕದ ಅಧ್ಯಕ್ಷ ಹನುಮಂತ ತೋಟದ, ಪವಾಡೆಪ್ಪ ಹಳೇಗೌಡರ, ಹನುಮಂತರಾಯ ಗುಣಕಿ, ಕೃಷ್ಣಪ್ಪ ಬಮರೆಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಗಿರೀಶ ಶಿವಯೋಗಿ, ಬಸಣ್ಣ ಪೂಜಾರಿ ಇತರರು ಇದ್ದರು.