ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆ

ಹೂವಿನಹಿಪ್ಪರಗಿ: ಗ್ರಾಮದಲ್ಲಿ 10 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ದುಷ್ಕರ್ವಿುಗಳನ್ನು ಕೂಡಲೇ ಬಂಧಿಸಿ, ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬಸವನಬಾಗೇವಾಡಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗುರುವಾರ ಸಂಜೆ ಹೂವಿನಹಿಪ್ಪರಗಿ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಶವ ಕಂಡ ಬಾಲಕಿ ತಂದೆ ಬಸವನಬಾಗೇವಾಡಿ ಠಾಣೆಗೆ ದೂರು ನೀಡಿದ್ದರು.

ಶವ ಪರೀಕ್ಷೆಗಾಗಿ ಬಾಲಕಿ ದೇಹವನ್ನು ಬಸವನಬಾಗೇವಾಡಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿತ್ತು. ಶುಕ್ರವಾರ ಬಸವನಬಾಗೇವಾಡಿಯ ಶವಗಾರಕ್ಕೆ ಆಗಮಿಸಿದ ಸಮಾಜ ಬಾಂಧವರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಬಾಲಕಿಯನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಬಸವನಬಾಗೇವಾಡಿ ಪಟ್ಟಣದ ಶವಪರೀಕ್ಷೆ ಕೇಂದ್ರದ ಮುಂದೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಬಾಲಕಿಯನ್ನು ಕೊಲೆ ಮಾಡಿದ ದುಷ್ಕರ್ವಿುಗಳನ್ನು ಕೂಡಲೇ ಬಂಧಿಸಬೇಕು. ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಹಾಗೂ ಕ್ಷೇತ್ರದ ಶಾಸಕರು ಬಂದು ನ್ಯಾಯ ಒದಗಿಸಬೇಕೆಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.

ಘಟನಾಸ್ಥಳಕ್ಕೆ ಬಂದ ಹೆಚ್ಚುವರಿ ಎಸ್ಪಿ ಬಿ.ಎಸ್. ನೇಮಗೌಡ ಆಗಮಿಸಿ, ಪ್ರತಿಭಟನಾನಿರತರ ಮನವೊಲಿಸಲು ಯತ್ನಿಸಿದಾಗ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಸೂಕ್ತ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಹಾಗೂ ವಿಶೇಷ ತನಿಖಾ ತಂಡ ರಚಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.

ತಹಸೀಲ್ದಾರ್ ಎಂ.ಎನ್.ಚೋರಗಸ್ತಿ, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್​ಐ ಗುರುಶಾಂತ ದಾಶ್ಯಾಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋದ್ದಾರ ಇದ್ದರು. ಪ್ರತಿಭಟನೆಯಲ್ಲಿ ವಾಲ್ಮೀಕಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಬಿರಾದಾರ, ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಡಿಎಸ್​ಎಸ್ ಜಿಲ್ಲಾ ಅಧ್ಯಕ್ಷ ಸುರೇಶ ಮಣ್ಣೂರ, ಬಸನಗೌಡ ಪಾಟೀಲ, ಸುರೇಶ ತಳವಾರ, ಸಿದ್ಧು ಮೇಟಿ, ರಾಜು ರ್ಯಾಗೇರಿ, ಮಹಾಂತೇಶ ಸಾಸಾಬಾಳ, ಬಿ.ಎಸ್.ಗಸ್ತಿ, ಶರಣು ಯಾಳವಾರ, ಗಂಗಾಧರ ಇಂಗಳೇಶ್ವರ, ಸಂಗಮೇಶ ದೊಡಮನಿ, ಪ್ರಭು ನಾಟೀಕಾರ, ಅಶೋಕ ನಂದಿ, ಪರಶುರಾಮ ದಿಂಡವಾರ, ಮಲ್ಲಿಕಾರ್ಜುನ ಬಟಗಿ, ಶರಣಗೌಡ ಪಾಟೀಲ, ಮಳಸಿದ್ದ ನಾಯ್ಕೋಡಿ, ಮಹಾಂತೇಶ ಚಕ್ರವರ್ತಿ ಇದ್ದರು.