ಜಾಕ್‌ವೆಲ್ ದುರಸ್ತಿಗೆ ಹಣ ಬಿಡುಗಡೆ

ಹೂವಿನಹಿಪ್ಪರಗಿ: ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಅದ್ದೂರಿಯಾಗಿ ಆಚರಿಸಬೇಕು ಹಾಗೂ ಬಳೂತಿ ಜಾಕ್‌ವೆಲ್ ದುರಸ್ತಿಗೆ ಶೀಘ್ರವೇ ಚಾಲನೆ ನೀಡಬೇಕೆಂದು ಆಗ್ರಹಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ರೈತರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಬಸವಣ್ಣನವರ ಜನ್ಮ ಭೂಮಿಯಲ್ಲಿ ಬಸವ ಜಯಂತಿಯನ್ನು ಮೂರು ದಿನ ವಚನ ಸಂಗೀತೋತ್ಸವ ಮೂಲಕ ಸರ್ಕಾರದ ವತಿಯಿಂದ ಆಚರಿಸುವಂತಾಗಬೇಕು. ಬಸವ ಜಯಂತಿಯ ಉದ್ಘಾಟನೆ ಮುಖ್ಯಮಂತ್ರಿಗಳಿಂದ ನೆರವೇರಬೇಕು. ಸುಟ್ಟು ಹೋಗಿರುವ ಬಳೂತಿ ಜಾಕ್‌ವೆಲ್‌ನಲ್ಲಿ ಹೊಸ ಯಂತ್ರೋಪಕರಣ ಅಳವಡಿಸಲು 12 ಕೋಟಿ ರೂ. ಶೀಘ್ರವೇ ಮಂಜೂರು ಮಾಡುವಂತೆ ಶ್ರೀಗಳು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ನೀರಾವರಿ ವಿಷಯದಲ್ಲಿ ವಿಳಂಬ ಮಾಡುವುದಿಲ್ಲ. ಜಾಕ್‌ವೆಲ್ ದುರಸ್ತಿಗೆ ಅಗತ್ಯವಿರುವ ಹಣವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಅಖಂಡ ಕರ್ನಾಟಕ ರೈತ ಸಂಘಧ ರಾಜ್ಯ ಘಟಕದ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಯರನಾಳದ ಸಂಗನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ಧಲಿಂಗ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಮಾಜಿ ಸಚಿವ ಎಸ್.ಕೆ. ಬೆಳ್ಳುಭ್ಬಿ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ನಾನಾಗೌಡ ಪಾಟೀಲ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ರಾಮಚಂದ್ರ ಬಮ್ಮನಜೋಗಿ, ಸದಾಶಿವ ಬರಟಗಿ, ಸಿದ್ದರಾಮ ಅಂಗಡಗೇರಿ, ಪಾಂಡು ಪ್ಯಾಟಿ, ಈರಣ್ಣ ದೇವರಗುಡಿ, ಸಿದ್ದಲಿಂಗಯ್ಯ ಹಿರೇಮಠ, ಹಣಮಂತರಾಯ ಗುಣಕಿ, ಶಾರದಾ ಲಮಾಣಿ ಇದ್ದರು.