ಆಸ್ತಿ ನೋಂದಣಿಗೆ ಸಾರ್ವಜನಿಕರ ಹರಸಾಹಸ

ಹಡಗಲಿ ತಾಲೂಕಾಡಳಿತ ಸೌಧದ 2ನೇ ಮಹಡಿಯಲ್ಲಿ ಕಚೇರಿ | ವೃದ್ಧರು-ಅಂಗವಿಕಲರಿಗೆ ತೊಂದರೆ

ಮಧುಸೂದನ ಕೆ.

ಹೂವಿನಹಡಗಲಿ: ಪಟ್ಟಣದಲ್ಲಿ ತಹಸಿಲ್ ಕಚೇರಿ ಆರಂಭವಾಗಿ ಹಲವು ವರ್ಷಗಳಾಗಿವೆ. ಅಂದಿನಿಂದ ಕಟ್ಟಡದ ಎರಡನೇ ಮಹಡಿಯಲ್ಲಿ ಉಪನೋಂದಾಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರು ಮೆಟ್ಟಿಲು ಹತ್ತಿ ಇಳಿಯಲು ಹರಸಾಹಸ ಮಾಡಬೇಕಾಗಿದೆ.

ಕಂದಾಯ ಇಲಾಖೆಗೆ ಸಂಪರ್ಕ ಹೊಂದಿರುವ ಕೆಲ ಕಚೇರಿಗಳನ್ನು ತಾಲೂಕು ಆಡಳಿತ ಸೌಧ ಕಟ್ಟಡದಲ್ಲಿಯೇ ಇರಬೇಕು ಎನ್ನುವ ಉದ್ದೇಶದಿಂದ ನಿರ್ಮಿಸಿರುವ ಕಚೇರಿಯಾಗಿದೆ. ಆದರೆ, ನಿತ್ಯ ಕಚೇರಿಯ ಕೆಲಸಕ್ಕೆ ಬರುವವರಿಗೆ 2ನೇ ಮಹಡಿ ಏರುವುದು ಕಷ್ಟವಾಗುತ್ತಿದೆ. ಅಖಂಡ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ತಾಲೂಕು ಒಳಪಟ್ಟ ದಿನಗಳಿಂದಲೂ ಕಚೇರಿ ಸ್ಥಳಾಂತರಕ್ಕೆ ಡಿಸಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ವೃದ್ಧರು ಹಾಗೂ ಅಂಗವಿಕಲರು ಎರಡನೇ ಮಹಡಿಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ.

ಹೊತ್ತು ನಡೆಯುವ ಮಕ್ಕಳು

ಮನೆ, ಜಮೀನು, ನಿವೇಶನ ಹಾಗೂ ಇತರ ಆಸ್ತಿಗಳ ನೋಂದಣಿಗೆ ಕಚೇರಿಗೆ ಬರುವ ವೃದ್ಧರು 2ನೇ ಮಹಡಿ ಏರಲಾಗದ ಸಂದರ್ಭದಲ್ಲಿ ಅವರ ಮಕ್ಕಳು ಅಥವಾ ಆಟೋ ಚಾಲಕರು ಹೊತ್ತುಕೊಂಡು ಮಹಡಿ ಏರುವ ದೃಶ್ಯಗಳು ಸಾಮಾನ್ಯವಾಗಿವೆ. ಅಂಗವಿಕಲರು ಮೆಟ್ಟಿಲು ಏರಲಾಗದೆ ಪಕ್ಕದಲ್ಲಿಯೇ ಇರುವ ಕಬ್ಬಿಣದ ಸಲಾಕೆಗಳನ್ನು ಹಿಡಿದು ಒಂದೊಂದೇ ಮೆಟ್ಟಿಲಿನ ಮೇಲೆ ಕುಳಿತು ಏರುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಜಾರಿ ಬಿದ್ದಿರುವ ಪ್ರಸಂಗಳು ನಡೆದಿವೆ.

ಆಸ್ತಿ ನೋಂದಣಿಗೆ ಸಾರ್ವಜನಿಕರ ಹರಸಾಹಸ
ಹೂವಿನಹಡಗಲಿಯ ಉಪನೋಂದಾಣಾಧಿಕಾರಿಗಳ ಕಚೇರಿಯ ಮುಂದೆ ಕುಳಿತಿರುವ ಜನರು.

ಅಧಿಕಾರಿಗಳ ಕಡೆಗಣನೆ:

ಹೂವಿನಹಡಗಲಿ ತಾಲೂಕು ಆಡಳಿತ ಸೌಧ ನಿರ್ಮಾಣವಾದ ಬಳಿಕ ಕಚೇರಿಯನ್ನು ಕೆಳ ಹಂತದ ಕೋಣೆಯಲ್ಲಿಯೇ ಆರಂಭಿಸಬೇಕು ಎಂಬ ಉದ್ದೇಶ ಹೊಂದಲಾಗಿತ್ತು. ಆದರೆ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಮತ್ತು ನಿರ್ಲಕ್ಷೃದಿಂದ 2ನೇ ಮಹಡಿಯಲ್ಲಿಯೇ ಕಚೇರಿ ಮುಂದುವರಿದಿದೆ. ನಿತ್ಯ ಸಾಹಸ ಪಟ್ಟು ಕಚೇರಿಗೆ ಬರುವವರನ್ನು ಗಮನಿಸಿಯೂ ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಚ್ಚಾಗಿದೆ ಮಧ್ಯವರ್ತಿಗಳ ಹಾವಳಿ

ಕಚೇರಿಯಲ್ಲಿ ಇಬ್ಬರು ಕಾಯಂ ಅಧಿಕಾರಿಗಳಿದ್ದು, ಇನ್ನುಳಿದ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿಗೆ ಬರುವ ಜನರು ಹಣ ನೀಡಿದರೆ ಮಾತ್ರ ಅವರ ಕೆಲಸಗಳು ಬೇಗನೆ ಪೂರ್ಣಗೊಳ್ಳುತ್ತವೆ. ಇಲ್ಲದಿದ್ದರೆ ಕೆಲಸ ಮಾಡಿಕೊಡಲು ಸಿಬ್ಬಂದಿ ವಿನಾಕಾರಣ ಸತಾಯಿಸುತ್ತಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಅಲ್ಲದೆ ಕಳೆದ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಮತ್ತು ಜಿಲ್ಲಾಧಿಕಾರಿ ಸಭೆಯಲ್ಲೂ ನೋಂದಣಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರಿಗೆ ನಿತ್ಯ ತೊಂದರೆಯಾಗುತ್ತಿದ್ದು. ಕ್ಷೇತ್ರದ ಜನತೆ ಸಾಕಷ್ಟು ಬಾರಿ ನನ್ನ ಗಮನಕ್ಕೆ ತಂದಿದ್ದಾರೆ ಎಂದು ಶಾಸಕರು ಸಭೆಗೆ ತಿಳಿಸಿದ್ದರು.

ನಾನು ಹೂವಿನಹಡಗಲಿ ಕಚೇರಿಗೆ ವರ್ಗಾವಣೆಯಾಗಿ ಬಂದ ದಿನದಿಂದಲೂ ವೃದ್ಧರು ಮತ್ತು ಅಂಗವಿಕಲರು ಪಡುತ್ತಿರುವ ಕಷ್ಟವನ್ನು ಗಮನಿಸಿ ಕಚೇರಿ ಸ್ಥಳಾಂತರಕ್ಕೆ ಇಲಾಖೆಯ ಮೇಲಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೂ ತಂದಿರುವೆ. ಇಲಾಖೆಯ ಮೇಲಧಿಕಾರಿಗಳು ನೀಡುವ ನಿರ್ದೇಶನದ ಮೇರೆಗೆ ಕಚೇರಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು.
| ತಿಪ್ಪೇಸ್ವಾಮಿ ಉಪನೋಂದಾಣಾಧಿಕಾರಿ, ಹೂವಿನಹಡಗಲಿ

ತಾಲೂಕು ಆಡಳಿತ ಸೌಧದ ಮೇಲಿನ ಮಹಡಿಯಲ್ಲಿರುವ ಕಚೇರಿಯನ್ನು ಕೆಳಭಾಗದ ಕೋಣೆ ಅಥವಾ ಪಟ್ಟಣದ ಹೃದಯ ಭಾಗದಲ್ಲಿನ ಕಚೇರಿಗಳಿಗೆ ಸ್ಥಳಾಂತರಿಸಿದರೆ ಜನತೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಚೇರಿ ಸ್ಥಳಾಂತರ ಮಾಡಿದರೆ ಅನುಕೂಲವಾಗುತ್ತದೆ.
| ಗಡಿಗಿ ಪ್ರತಾಪ್ ಹೂವಿನಹಡಗಲಿ ನಿವಾಸಿ

Share This Article

ಬಿಳಿ vs ಗುಲಾಬಿ: ಯಾವ ಬಣ್ಣದ ಡ್ರ್ಯಾಗನ್​ ಫ್ರೂಟ್ಸ್ ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Dragon fruit

ಡ್ರ್ಯಾಗನ್​ ಫ್ರೂಟ್ಸ್ ( Dragon fruit ) ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲೇ ತನ್ನದೇಯಾದ…

International Coffee Day : ಬೆಕ್ಕಿನ ಮಲದಿಂದ ತಯಾರಿಸುವ ಬಿಸಿ ಬಿಸಿ ‘ಕಾಫಿ’ ಗೆ ಭಾರಿ ಡಿಮ್ಯಾಂಡ್​​….

ಬೆಂಗಳೂರು: (International Coffee Day )  ಕಾಫಿಯ  ( Coffee ) ಕ್ರೇಜ್  ಎಷ್ಟರ ಮಟ್ಟಿಗೆ…

Life Partner Secrets : ನಿಮ್ಮ ಹೆಂಡ್ತಿಯ ಮುಂದೆ ಈ ವಿಚಾರ ಮುಚ್ಚಿಟ್ರೆ ಕಾದಿದೆ ಅಪಾಯ!

ಬೆಂಗಳೂರು: ದಾಂಪತ್ಯ ಎನ್ನುವುದು ಸುಂದರವಾದ ಬಂಧವಾಗಿದೆ. ದಂಪತಿಗಳ ಮಧ್ಯೆ ಪ್ರೀತಿ, ಹೊಂದಾಣಿಕೆ ಮುಖ್ಯವಾಗಿದೆ. ಚಾಣಕ್ಯನ ನೀತಿಶಾಸ್ತ್ರದಲ್ಲಿ…