ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಹೂವಿನಹಡಗಲಿ: ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಸಂಸದ ಹೆಸರಿಗೆ ಮಾತ್ರ ಉಗ್ರಪ್ಪ, ಅಭಿವೃದ್ಧಿ ವಿಷಯದಲ್ಲಿ ಕಳೆದ ಎಂಟು ತಿಂಗಳಿನಿಂದ ಅನುದಾನ ತಂದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು.

ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪೂರ್ವಭಾವಿ ಸಭೆ ಉದ್ಘಾಟಿಸಿ ಸೋಮವಾರ ಮಾತನಾಡಿದರು. ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ. ತೋರಿಕೆಗಾಗಿ ಸಹಕಾರ ಸಂಘಗಳ ಸಾಲ ಮನ್ನಾ ಮಾಡಿದ್ದೇವೆ ಎಂದು ಕಾಂಗ್ರೆಸ್ ಜೆಡಿಎಸ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಲು ಸುಮಲತಾ ಅಂಬರೀಷ್ ಅವರನ್ನು ಪಕ್ಷ ಬೆಂಬಲಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದು ಶತಸಿದ್ಧ ಎಂದರು.

ಶಾಸಕ ಬಿ.ಶ್ರೀರಾಮುಲು ಮಾತನಾಡಿ, ಸಮ್ಮಿಶ್ರ ಸರ್ಕಾರದಿಂದ ಇದುವರೆಗೂ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಎರಡು ಪಕ್ಷದ ಮುಖಂಡರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ , ಲೋಕಸಭೆ ಅಭ್ಯರ್ಥಿ ದೇವೇಂದ್ರಪ್ಪ, ಮಾಜಿ ಶಾಸಕ ಬಿ.ಚಂದ್ರನಾಯ್ಕ, ಓದೋಗಂಗಪ್ಪ, ಮಧುನಾಯ್ಕ ಮಾತನಾಡಿದರು. ಮಾಜಿ ಎಂಎಲ್ಸಿ ಮೃತ್ಯುಂಜಯ ಜಿನಗಾ, ತಾಲೂಕು ಅಧ್ಯಕ್ಷ ಎಂ.ಬಿ.ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಪೂಜಪ್ಪ, ಜಿಪಂ ಸದಸ್ಯರಾದ ಲಲಿತಾಬಾಯಿ, ಎಸ್.ಕೊಟ್ರೇಶ, ತಾಪಂ ಸದಸ್ಯ ಈಟಿ ಲಿಂಗರಾಜ್ ಇತರರಿದ್ದರು.

ಡಿ.ಕೆ.ಶಿವಕುಮಾರ್‌ಗೆ ಪಲ್ಲಕ್ಕಿ ಹೊರುವ ಭಾಗ್ಯ ಎಂದಿಗೂ ಸಿಗವುದಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ. ಸೋತ ಕಾಂಗ್ರೆಸ್ ಹೆಣವನ್ನು ಡಿಕೆಶಿ ಹೊರಬೇಕಾಗುತ್ತದೆ.
| ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿ