ಹಂಪಿ ಉತ್ಸವ ನಡೆಸಲು ಶೀಘ್ರ ಸಭೆ

ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಭರವಸೆ ಕಾಮಗಾರಿಗೆ ಭೂಮಿಪೂಜೆ

ಹೂವಿನಹಡಗಲಿ (ಬಳ್ಳಾರಿ): ಹಂಪಿ ಉತ್ಸವ ನಡೆಸಲು ಈಗಾಗಲೇ ಸಂಸದರ ಜತೆ ಚರ್ಚೆ ನಡೆಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ, ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.

ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಕಾಲೇಜಿನಲ್ಲಿ ಸುತ್ತುಗೋಡೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. ಹಂಪಿ ಉತ್ಸವ ನಡೆಸಲು ನನ್ನ ಸಂಪೂರ್ಣ ಸಹಮತವಿದೆ. ಉತ್ಸವ ನಡೆಸಲು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ ಎಂದು ಹೇಳಿದರು.

ಮೈಲಾರ ಲಿಂಗೇಶ್ವರ ಜಾತ್ರೆಯ ಪೂರ್ವಭಾವಿ ಸಭೆ ಮುಂದಿನ ವಾರ ನಡೆಸಲಾಗುವುದು. ಜಾತ್ರೆಯಲ್ಲಿ ಕಾರ್ಣೀಕ ಹೇಳುವ ಗೊರವಯ್ಯನ ನೇಮಕದಲ್ಲಿ ಕಾನೂನಾತ್ಮಕವಾಗಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಪಟ್ಟಣದ ಗೃಹ ನಿರ್ಮಾಣ ಮಂಡಳಿ ಕಾಲನಿಯಲ್ಲಿ ಗಣೇಶ ದೇವಸ್ಥಾನದ ಕಟ್ಟಡಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ 1.80 ಕೋಟಿ ರೂ. ವೆಚ್ಚದ ಪ್ರಾಥಮಿಕ, ಪ್ರೌಢಶಾಲೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ತಹಸೀಲ್ದಾರ್ ಕೆ.ರಾಘವೇಂದ್ರರಾವ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಅಧ್ಯಕ್ಷೆ ಕೆ.ಶಾರದಮ್ಮ, ಪುರಸಭೆ ಅಧ್ಯಕ್ಷೆ ಮರ್ದಾನ್ ಬೀ, ತಾಪಂ ಸದಸ್ಯ ನಾರಾಯಣಸ್ವಾಮಿ, ಎಸ್.ಹಾಲೇಶ, ವಕೀಲೆ ಜ್ಯೋತಿ ಮಲ್ಲಣ್ಣ ಇತರರು ಇದ್ದರು.