ಖನಿಜಾನ್ವೇಷಣೆಯಲ್ಲಿ ಜಿಎಸ್‌ಐ ತಂಡ

ಹಟ್ಟಿಚಿನ್ನದಗಣಿ: ಪಟ್ಟಣದ ಸುತ್ತಲಿನ ಪ್ರದೇಶದ ಭೂಗರ್ಭದಲ್ಲಿನ ಚಿನ್ನ ಮತ್ತಿತರ ಖನಿಜಗಳ ಪ್ರಮಾಣ ಅರಿಯಲು ಕೇಂದ್ರ ಸರ್ಕಾರದ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ(ಜಿಎಸ್‌ಐ) ಇಲಾಖೆ ಕೆಲ ದಿನಗಳಿಂದ ಖನಿಜಾನ್ವೇಷಣೆ ನಡೆಸುತ್ತಿದೆ.

ಪಟ್ಟಣದ ಉತ್ತರ ದಿಕ್ಕಿನಲ್ಲಿನ ಗ್ರಾಮಗಳಾದ ಮಾಚನೂರು, ಯಲಗಟ್ಟಾ, ಬಂಡೆಬಾವಿ ಸೇರಿ ದೊಡ್ಡಿಗಳ ಪ್ರದೇಶದಲ್ಲಿ ಖನಿಜಾನ್ವೇಷಣಾ ನಡೆದಿದ್ದು, ಭೂ ಮೇಲ್ಮಟ್ಟದ ಕಲ್ಲುಗಳಿಂದ ಹಿಡಿದು ಭೂಮಿಯ ಆಳದಲ್ಲೂ ಸರ್ವೇ ಭರದಿಂದ ಶಸಾಗಿದೆ.

ಎಷ್ಟು ಪ್ರಮಾಣದಲ್ಲಿ ಯಾವ ಯಾವ ಖನಿಜಗಳು ಸಿಗಲಿವೆ ಎಂಬ ವರದಿಯನ್ನು ಜಿಎಸ್‌ಐ ಕೇಂದ್ರ ಸರ್ಕಾರಕ್ಕೆ ನೀಡಲಿದೆ. ಆ ನಂತರ ಕೇಂದ್ರ ಸರ್ಕಾರ ಯಾರಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕೆಂಬುದನ್ನು ನಿರ್ಧರಿಸಲಿದೆ. ಹಟ್ಟಿ ಸುತ್ತಲಿನ ಯಾವ ಪ್ರದೇಶದಲ್ಲೂ ಖನಿಜಗಳು ದೊರೆತರೆ ಅಲ್ಲಿ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದಗಣಿ ಕಂಪನಿಗೇ ನೀಡಬೇಕೆಂಬುದು ಸ್ಥಳೀಯರ ಕೂಗು. ಖನಿಜಾನ್ವೇಷಣೆ ಸದ್ಯ ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ನಿರ್ಧಾರದ ಮೇಲೆ ಸ್ಥಳೀಯರ ಪ್ರತಿಕ್ರಿಯೆ ವ್ಯಕ್ತವಾಗಲಿದೆ.

ನಿರಂತರ ಉತ್ಪಾದನೆ: ಅಶೋಕನ ಕಾಲದಲ್ಲೂ ಇಲ್ಲಿ ಚಿನ್ನ ತೆಗೆಯಲಾಗುತ್ತಿತ್ತು ಎಂಬುದಕ್ಕೆ ಅನೇಕ ಪುರಾವೆಗಳಿದ್ದು, ಹಟ್ಟಿಚಿನ್ನದಗಣಿ ಕಂಪನಿ 7 ದಶಕಗಳಿಂದ ಚಿನ್ನ ಉತ್ಪಾದಿಸುತ್ತಿದೆ. ಕಂಪನಿ ಕಾಯ್ದೆ ಅನ್ವಯ 1947 ಜು.8ರಂದು ನೋಂದಾಯಿತಗೊಂಡ ನಂತರ, ಅಧುನಿಕ ರೀತಿಯಲ್ಲಿ ನಿರಂತರ ಚಿನ್ನ ಉತ್ಪಾದಿಸುತ್ತಿದೆ. ಅನ್ವೇಷಣಾ ವರದಿ ಪ್ರಕಾರ ನಾರ್ತ್ ಹಾಗೂ ಸೌತ್ ಬೆಲ್ಟ್‌ನಲ್ಲಿ ಅಧಿಕ ಚಿನ್ನದ ನಿಕ್ಷೇಪವಿದೆ. ಸದ್ಯ ಹಟ್ಟಿಚಿನ್ನದಗಣಿ ಕಂಪನಿಯಲ್ಲಿ ಇವೇ ದಿಕ್ಕುಗಳಲ್ಲಿ ಚಿನ್ನ ಉತ್ಪಾದಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇನ್ನೂ 25 ವರ್ಷಗಳವರೆಗೆ ಕೊರತೆಯಾಗದಷ್ಟು ಚಿನ್ನದ ನಿಕ್ಷೇಪ ಇಲ್ಲಿ ದೊರೆಯಲಿದೆ ಎನ್ನಲಾಗುತ್ತಿದೆ.

90ರ ದಶಕದಲ್ಲಿ ರಾಷ್ಟ್ರದಲ್ಲಿ ಜಾರಿಯಾದ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಪರಿಣಾಮವಾಗಿ ಆಸ್ಟ್ರೇಲಿಯಾ ಮೂಲದ ಖಾಸಗಿ ಕಂಪನಿ ಇಂಡೋಫಿಲ್ ಭಾರತದಲ್ಲಿ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿ ಹೆಸರಲ್ಲಿ 2003-04ರಲ್ಲಿ ಪಟ್ಟಣದ ಕೆಲ ಕಡೆ ಖನಿಜಾನ್ವೇಷಣೆ ನಡೆಸಿತ್ತು. ಅಧಿಕ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪ ದೊರೆತ ಕಾರಣ ಹಟ್ಟಿಚಿನ್ನದಗಣಿ ಕಂಪನಿಯ ಉತ್ತರ ಭಾಗದಲ್ಲಿ ಮೈನಿಂಗ್ ಆರಂಭಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಸ್ಥಳೀಯ ಕಾರ್ಮಿಕ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದಗಣಿ ಕಂಪನಿಯೇ ಉತ್ತರ ಭಾಗದಲ್ಲಿ ಗಣಿಗಾರಿಕೆ ಆರಂಭಿಸಸಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮೊರೆ ಹೋಗಿದ್ದವು. ಹೀಗಾಗಿ ಖಾಸಗಿ ಕಂಪನಿ ಬರುವುದು ತಪ್ಪಿದೆ. ಆದರೂ ಸಹ ಆ ಕಂಪನಿ ಈಗಲೂ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಗಣಿಗಾರಿಕೆಗಾಗಿ ಪೈಟ್ ನಡೆಸುತ್ತಿದೆ.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಹಟ್ಟಿಚಿನ್ನದಗಣಿ ಕಂಪನಿಯ ಉತ್ತರಭಾಗದ ಗ್ರಾಮಗಳಾದ ಮಾಚನೂರು, ಯಲಗಟ್ಟಾ, ಬಂಡೆಬಾವಿ ಸೇರಿ ದೊಡ್ಡಿಗಳ ಗುಡ್ಡಗಾಡು ಪ್ರದೇಶದಲ್ಲಿ ಖನಿಜಾನ್ವೇಷಣೆ ನಡೆಸಲಾಗುತ್ತಿದೆ. ಚಿನ್ನ, ತಾಮ್ರ, ಬೆಳ್ಳಿ ಮತ್ತಿತರ ಖನಿಜಗಳ ಲಭ್ಯತೆ ಕಂಡು ಬರುತ್ತಿದೆ. ಅವುಗಳ ಪ್ರಮಾಣ ಪರೀಕ್ಷೀಸಿ, 6 ತಿಂಗಳಲ್ಲಿ ವರದಿ ನೀಡಲಾಗುವುದು.
| ಚಕ್ರವರ್ತಿ ನಿರ್ದೇಶಕ, ಭೂ ಅನ್ವೇಷಣಾ ಇಲಾಖೆ(ಜಿಎಸ್‌ಐ)