ಎಸ್ಡಿಎಂಸಿ ಅಧ್ಯಕ್ಷನಿಂದ ಅರೆಬೆತ್ತಲೆ ಪ್ರತಿಭಟನೆ

ಶಾಲೆ ಕೊಠಡಿಗಳ ಕಾಮಗಾರಿ ಕಳಪೆ ಆರೋಪ

ಹಟ್ಟಿಚಿನ್ನದಗಣಿ : ಶಾಲೆ ಕೊಠಡಿಗಳ ನಿರ್ಮಾಣ ಕಾಮಗಾರಿ ಕಳೆಪೆಯಿಂದ ಕೂಡಿವೆ ಎಂದು ಆರೋಪಿಸಿ ಹಟ್ಟಿ ಕ್ಯಾಂಪ್‌ನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮುನ್ನಾಭಾಯ್ ಮಂಗಳವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ ನಿರ್ಮಿಸುತ್ತಿರುವ ಕೊಠಡಿಗಳ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿವೆ. ಸರಿಯಾಗಿ ನಿರ್ವಹಿಸಬೇಕೆಂದು ಸಂಬಂಧಪಟ್ಟ ಗುತ್ತಿಗೆದಾರರು, ಜೆಇ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗೆ ಆವರಣವೇ ಇಲ್ಲ. ಪ್ರಾರ್ಥನೆಗೆ ನಿಲ್ಲಿಸಲು ಕಷ್ಟವಾಗುತ್ತಿದೆ. ಇಂಥದರಲ್ಲಿ 13 ಅಡಿ ಉದ್ದದ ಸ್ಥಳದಲ್ಲಿ ಎರಡು ಶೌಚಗೃಹ ಹಾಗೂ 1 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲಾಗುತ್ತಿದೆ. ಕ್ರಿಯಾಯೋಜನೆ ರೂಪಿಸಿದವರ‌್ಯಾರು ಎಂದು ಸ್ಥಳದಲ್ಲಿದ್ದ ಕಾರ್ಮಿಕರನ್ನು ಪ್ರಶ್ನಿಸಿದ ಮುನ್ನಾಭಾಯ್, ಸ್ಥಳಕ್ಕೆ ಜೆಇ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕ್ಷಕರಿಗೆ ಪತ್ರ ಬರೆಯುವುದರ ಜತೆಗೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.