ಕಂಪನಿ ಕ್ರೀಡಾಸಂಸ್ಥೆಗೆ ಚುನಾವಣೆ ನಾಳೆ

ಕಾರ್ಯದರ್ಶಿ ಸ್ಥಾನಕ್ಕೆ ಐವರ ಸ್ಪರ್ಧೆ |ಬೆಳಗ್ಗೆ 9 ರಿಂದ ಸಂಜೆ 4.30ರವರೆಗೆ ಮತದಾನ

ಹಟ್ಟಿಚಿನ್ನದಗಣಿ: ಚಿನ್ನದಗಣಿ ಕಂಪನಿ ವ್ಯಾಪ್ತಿಯ ನೌಕರರ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಸ್ಥಾನಕ್ಕೆ ಮಾ.3ರಂದು ಚುನಾವಣೆ ನಡೆಯಲಿದೆ.

ಕಂಪನಿಯ ನೌಕರರ ವರ್ಗಕ್ಕೆ ಕ್ರೀಡಾ ಸೌಲಭ್ಯ, ಮನರಂಜನೆ ಒದಗಿಸುವ ಉದ್ದೇಶದಿಂದ ಕ್ರೀಡಾ ಸಂಸ್ಥೆ ಸ್ಥಾಪಿಸಲಾಗಿದೆ. ಅದರ ನಿರ್ವಹಣೆಗೆ 3 ವರ್ಷಗಳ ಅವಧಿಗೆ ನೌಕರರಲ್ಲಿ ಒಬ್ಬರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ. ಕಂಪನಿಯ 4050 ನೌಕರರಲ್ಲಿ ಈ ಸಂಸ್ಥೆಗೆ ಪ್ರತಿ ತಿಂಗಳು 5 ರೂ. ಚಂದಾ ನೀಡಿ 2854 ನೌಕರರು ಸದಸ್ಯರಾಗಿದ್ದು, ಮತದಾನ ಹಕ್ಕು ಹೊಂದಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಕಳೆದ ಸಲ ಆಯ್ಕೆಯಾಗಿದ್ದ ಯಂಕೋಬ್ ಸೇರಿ ಅನ್‌ಬರಸನ್, ಮಹೇಶ, ನವೀನ್‌ರಾಜ, ಸಂಜೀವಪ್ಪ ಸ್ಪರ್ಧಿಸಿದ್ದಾರೆ.

ಕಳೆದ ಮೂರು ವರ್ಷ ಕ್ರೀಡಾ ಸಂಸ್ಥೆಯಲ್ಲಿ ತಾವು ಮಾಡಿದ ಸಾಧನೆ ಮುಂದಿಟ್ಟುಕೊಂಡು ಯಂಕೋಬ್ ಪ್ರಚಾರ ನಡೆಸುತ್ತಿದ್ದಾರೆ. ಉಳಿದವರು ಯಂಕೋಬ್ ವೈಫಲ್ಯ, ಹೊಸದಾಗಿ ಸೌಲಭ್ಯ ಕಲ್ಪಿಸುವ ಕುರಿತು ಕರ ಪತ್ರಗಳ ಮೂಲಕ ಮತಯಾಚನೆಯಲ್ಲಿ ತೊಡಗಿದ್ದಾರೆ. ಮಾ.3ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಮತದಾನ ನಡೆಯಲಿದೆ. ಸಂಜೆ 5.30 ರಿಂದ ಮತಗಳ ಎಣಿಕೆ ನಡೆದ ನಂತರ ನಡೆಯುವ ಸಾಮಾನ್ಯ ಸಭೆಯಲ್ಲಿ ವಿಜೇತರ ಹೆಸರು ಘೋಷಿಸಲಾಗುವುದು ಎಂದು ಚುನಾವಣಾಧಿಕಾರಿ, ಕಂಪನಿ ವಸತಿ ವಿಭಾಗದ ಅಧಿಕಾರಿ ರಮೇಶ ತಿಳಿಸಿದ್ದಾರೆ.

Leave a Reply

Your email address will not be published. Required fields are marked *