ಜಾತಿ ಲೆಕ್ಕಾಚಾರದಲ್ಲಿ ರಾಜಶೇಖರ ಹಿಟ್ನಾಳ್‌ಗೆ ಮಣೆ – ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ

ಹಟ್ಟಿಚಿನ್ನದಗಣಿ: ಸಹೋದರನ ಪುತ್ರ ಶರಣಗೌಡ ಬಯ್ಯಪುರಗೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ನಿರಾಯಾಸವಾಗಿ ಗೆಲ್ಲುವ ಲಕ್ಷಣವಿದ್ದರೂ, ಪಕ್ಷ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ಮಣೆ ಹಾಕಿರುವುದು ಬೇಸರವಾಗಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಟ್ಟಿ ಕ್ಯಾಂಪ್‌ನ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಅಧಿಕೃತ ಕಚೇರಿಗೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ 9 ಜನ ಆಕಾಂಕ್ಷಿಗಳಿದ್ದರು. ಪಕ್ಷದ ಹೈಕಮಾಂಡ್ ಜಾತಿ, ಪ್ರದೇಶವಾರು ಲೆಕ್ಕಾಚಾರ ಮಾಡಿ ಹಿಟ್ನಾಳ್‌ಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಬಂಡಾಯವೇಳುವ ಸಾಧ್ಯತೆ ಇದೆ. ಆದರೆ, ಹಾಗೆ ಮಾಡುವುದು ತಪ್ಪು. ಪಕ್ಷದ ನಿರ್ಧಾರವನ್ನು ಸ್ವಾಗತಿಸಲೇಬೇಕು. ಬಹಳ ಜನ ಆಕಾಂಕ್ಷಿಗಳಿದ್ದಾಗ ಅಸಮಾಧಾನ ಸಹಜ, ಅತೃಪ್ತಿ ಬದಿಗಿಟ್ಟು ಪಕ್ಷಕ್ಕಾಗಿ ದುಡಿಯಬೇಕು ಎಂದರು.