ಮೇವು ತುಂಬಿದ ಎತ್ತಿನ ಬಂಡಿ ಪಲ್ಟಿ

<ಅರ್ಧಂಬರ್ದ ರಸ್ತೆ ನಿರ್ಮಾಣ ಪರಿಣಾಮ>

ಹಟ್ಟಿಚಿನ್ನದಗಣಿ: ಸಮೀಪದ ಮಾಚನೂರು ಗ್ರಾಮದ ಬಸ್ ನಿಲ್ದಾಣ ಬಳಿಯ ಮೇವು ತುಂಬಿಕೊಂಡು ಹೊರಟಿದ್ದ ಎತ್ತಿನ ಬಂಡಿ ಗುಂಡಿಗೆ ಬಿದ್ದು ಪಲ್ಟಿಯಾಗಿದೆ.

ಮಾಚನೂರು ಗ್ರಾಮದಲ್ಲಿ ಕಳೆದ ವರ್ಷ ಸಿಸಿ ರಸ್ತೆ ನಿರ್ಮಿಸಲಾಗಿತ್ತು, ಬಸ್ ನಿಲ್ದಾಣದ ಹತ್ತಿರದ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪ್ಲಾಟ್ ಮಾಲೀಕನೊಬ್ಬನ ಸಂಘರ್ಷದಿಂದ ಸುಮಾರು 40 ಅಡಿಯಷ್ಟು ರಸ್ತೆ ನಿರ್ಮಾಣ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬಸ್ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು.

ರಸ್ತೆ ನಿರ್ಮಿಸಿದ ಬಳಿಕ ಎಲ್ಲವೂ ಬಗೆ ಹರಿಯಿತು ಎನ್ನುವಷ್ಟರಲ್ಲಿ ರಸ್ತೆಯನ್ನು ಬೇಕಾಬಿಟ್ಟಿ ನಿರ್ಮಿಸಿರುವುದರಿಂದ ದಾರಿಹೋಕರು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗುವಂತಾಗಿದೆ. ತಗ್ಗಿಗೆ ವಾಹನಗಳು ಬಿದ್ದರೆ ಮೇಲೆಳುವುದೆ ದುಸ್ತರ, ಇನ್ನು ಬೈಕ್‌ಸವಾರರು ತಗ್ಗಿಗೆ ಬಿದ್ದರೆ ಬೆನ್ನುಮೂಳೆ ಮುರಿದು ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಎದುರಾಗಿದೆ. ಕೂಡಲೆ ಸಂಬಂಧಪಟ್ಟವರು ಗಮನಹರಿಸಿ ಸಂಚಾರಕ್ಕೆ ಸರಿಪಡಿಸಿಕೊಡಬೇಕೆಂದು ನಿವಾಸಿಗಳ ಆಗ್ರಹವಾಗಿದೆ.