ಬೆಂಗಳೂರು: ಪ್ರತಿನಿತ್ಯ ಮದ್ಯಪಾನ ಮಾಡಿಕೊಂಡು ಬಂದು ಹೆಂಡತಿಗೆ ಕಿರುಕುಳ ಕೊಟ್ಟಿದ್ದೇ ಇಲ್ಲೊಬ್ಬನ ಜೀವಕ್ಕೇ ಮುಳುವಾಗಿದೆ. ಅರ್ಥಾತ್, ಪತ್ನಿಗೆ ಕಿರುಕುಳ ಕೊಡುವ ಮೂಲಕ ಪತಿರಾಯ ತಾನಾಗಿಯೇ ಸಾವು ತಂದುಕೊಂಡಿದ್ದಾನೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಯ್ಯಪ್ಪನಹಳ್ಳಿಯ ಪೊಲೀಸರು ಸಾವಿಗೀಡಾದ ವ್ಯಕ್ತಿಯ ಹೆಂಡತಿ ಸೇರಿ ಇನ್ನಿಬ್ಬರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಶಕ್ತಿನಗರ ನಿವಾಸಿ ಲೋಕನಾಥ್ (48) ಕೊಲೆಗೀಡಾದ ವ್ಯಕ್ತಿ. ಇವರ ಪತ್ನಿ ಯಶೋಧ, ವಿಜಿನಾಪುರದ ಮುನಿರಾಜು, ಕಸ್ತೂರಿನಗರದ ಪ್ರಭು ಬಂಧಿತ ಆರೋಪಿಗಳು. ಇವರು ಮೇ 15ರಂದು ಲೋಕನಾಥ್ನನ್ನು ಕೊಲೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಪೊಲೀಸರು ತನಿಖೆ ನಡೆಸಿ ಎಲ್ಲ ಆರೋಪಿಗಳನ್ನೂ ಬಂಧಿಸಿದ್ದಾರೆ.
ಗಂಡ ದಿನಾ ಕುಡಿದುಕೊಂಡು ಬಂದು ಗಲಾಟೆ ಮಾಡಿ, ಹೊಡೆದು, ಅನುಮಾನಿಸುವುದು, ಅವಮಾನಿಸುವುದನ್ನು ಮಾಡುತ್ತಿದ್ದುದರಿಂದ ಬೇಸತ್ತ ಪತ್ನಿ ಯಶೋಧ ಅದನ್ನು ತನ್ನ ಪರಿಚಿತ ಮುನಿರಾಜುಗೆ ತಿಳಿಸಿದ್ದಳು. ಅಲ್ಲದೆ ತನ್ನ ಪತಿಗೆ ಹೊಡೆಯಲು ಹೇಳಿದ್ದಳು. ಈತ ತನ್ನ ಇನ್ನೊಬ್ಬ ಪರಿಚಿತ ಪ್ರಭು ಜತೆ ಸೇರಿಕೊಂಡು ಲೋಕನಾಥ್ನನ್ನು ಮದ್ಯಪಾನ ಮಾಡಲು ಕರೆಸಿದ್ದಾನೆ.
ಇದನ್ನೂ ಓದಿ:ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಲೋಕನಾಥ್ಗೆ ಮದ್ಯಪಾನ ಮಾಡಿಸಿದ ಇವರಿಬ್ಬರು, ತಾವು ಕುಡಿದಂತೆ ನಟಿಸಿದ್ದರು. ನಂತರ ಲೋಕನಾಥ್ಗೆ ನಶೆ ಏರುತ್ತಿದ್ದಂತೆ ಆತನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದರು. ಬಳಿಕ ಕೊಲೆ ಪ್ರಕರಣವನ್ನು ಮುಚ್ಚಿಡುವ ಸಲುವಾಗಿ ಶವವನ್ನು ಕಸ್ತೂರಿನಗರದಲ್ಲಿ ರೈಲ್ವೆ ಹಳಿ ಮೇಲೆ ಇರಿಸಿ ರೈಲು ಹಾದುಹೋಗುವಂತೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದರು. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಕೊನೆಗೂ ಕೊಲೆ ನಡೆದಿದ್ದನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ನೆಗೆಟಿವ್ನಲ್ಲೂ ಪಾಸಿಟಿವ್!; ಕರೊನಾ ವೈರಸ್ಗೆ ಹೆದರಿದರಾ ಕೊಲೆಗಡುಕರು, ಕಳ್ಳರು, ದರೋಡೆಕೋರರು?!
ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರ!