ನೀಲಿಚಿತ್ರದಲ್ಲಿರುವ ಸ್ತ್ರೀ ತನ್ನ ಪತ್ನಿಯೆಂದು ದೂರು ನೀಡಿದ ಪತಿ: ಮುಂದೇನಾಯ್ತು?

ಬೆಂಗಳೂರು: ಅತಿಯಾಗಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ವ್ಯಕ್ತಿಯೊಬ್ಬ, ವಿಡಿಯೋದಲ್ಲಿ ಇರುವುದು ನನ್ನ ಹೆಂಡತಿ ಎಂದುಕೊಂಡು ಆಕೆಯನ್ನು ದೂರ ಮಾಡಿಕೊಂಡ ಕಥೆಯಿದು.

37 ವರ್ಷದ ಈತ ಅಶ್ಲೀಲ ವಿಡಿಯೋಕ್ಕೆ ಅಂಟಿಕೊಂಡಿದ್ದ. ಹಾಗೇ ಒಂದು ದಿನ ವಿಡಿಯೋ ನೋಡುತ್ತಿದ್ದಾಗ ಅದರಲ್ಲಿರುವ ಮಹಿಳೆ ಆತನಿಗೆ ತನ್ನ ಪತ್ನಿಯಂತೆ ಕಂಡಿದ್ದಾಳೆ. ಅದರಿಂದ ತುಂಬ ಕೋಪಗೊಂಡ ಪತಿ ಕೂಡಲೇ ಆಕೆಯನ್ನು ಎಚ್​ಎಎಲ್​ ಠಾಣೆಗೆ ಕರೆದುಕೊಂಡು ಹೋಗಿ, ವಿಡಿಯೋ ಕ್ಲಿಪ್​ನಲ್ಲಿದ್ದ ಸ್ತ್ರೀ ತನ್ನ ಹೆಂಡತಿಯೇ ಎಂದು ದೂರು ನೀಡಿದ್ದಾನೆ. ಇದರಿಂದ ನೊಂದ ಆತನ ಗರ್ಭಿಣಿ ಪತ್ನಿ ಅವನನ್ನು ಬಿಟ್ಟು ಹೋಗಿದ್ದಾಳೆ.

ಆಂಧ್ರಪ್ರದೇಶ ಮೂಲದ ದಂಪತಿಗೆ ಈಗಾಗಲೇ ಒಂದು ಮಗು ಇದ್ದು ಮತ್ತೆ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ವಿಡಿಯೋ ನೋಡಿದ ಆತ, ನೀಲಿಚಿತ್ರದಲ್ಲಿರುವ ಮಹಿಳೆ ತನ್ನ ಹೆಂಡತಿಯೇ ಎಂದು ಹೇಳಿದ್ದಾನೆ. ನನ್ನ ಹೆಂಡತಿ ಹಾಗೂ ವಿಡಿಯೋದಲ್ಲಿರುವ ಸ್ತ್ರೀ ಇಬ್ಬರಿಗೂ ಒಂದೇ ಜಾಗದಲ್ಲಿ ಮಚ್ಚೆ ಇದೆ ಎಂದು ಕೂಗಾಡಿ, ಬೇರೆ ಪುರುಷನೊಂದಿಗೆ ಸೆಕ್ಸ್​ ಮಾಡಿದ್ದೀಯಾ ಎಂದು ಆಕೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಆತನ ಸಮಸ್ಯೆಯನ್ನು ಕೇಳಿದ ಪೊಲೀಸರು, ವಿಡಿಯೋದಲ್ಲಿ ಇರುವುದು ನಿಮ್ಮ ಹೆಂಡತಿ ಅಲ್ಲ. ಇದು ವಿದೇಶದಲ್ಲಿ ಶೂಟ್​ ಮಾಡಿದ ಚಿತ್ರ ಎಂದು ಹೇಳಿದರೂ ಆತ ಅದನ್ನು ಒಪ್ಪಲಿಲ್ಲ. ಅದನ್ನು ನೋಡಿದ ಪೊಲೀಸರು ದೂರುದಾರನಿಗೆ ನೀವು ಮಾನಸಿಕ ತಜ್ಞರಲ್ಲಿ ತೋರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಆದರೆ ಇದನ್ನೆಲ್ಲ ಸಹಿಸಲಾಗದ ಪತ್ನಿ ಪತಿಯನ್ನು ತೊರೆದು ತವರಿಗೆ ಹೊರಟುಹೋಗಿದ್ದಾರೆ.