ಗಂಡ – ಹೆಂಡತಿ ಮನಸ್ತಾಪವನ್ನು ಬಗೆಹರಿಸಲು ಬಂದ ಮಹಿಳೆಯನ್ನೇ ಮದುವೆಯಾದ ಮಾಜಿ ಯೋಧ!

ಬೆಳಗಾವಿ: ತನ್ನ ಮತ್ತು ಪತ್ನಿಯ ನಡುವೆ ಉಂಟಾಗಿರುವ ಮನಸ್ತಾಪ ಬಗೆಹರಿಸಿ ನ್ಯಾಯ ಪಂಚಾಯಿತಿ ಮಾಡಲು ಬಂದ ಮಹಿಳೆಯನ್ನೇ ಮದುವೆಯಾಗಿದ್ದಾನೆ ಈ ಮಾಜಿ ಯೋದ. ಈ ಮೂಲಕ ತನ್ನ ಪತ್ನಿಯರ ಸಂಖ್ಯೆಯನ್ನು ಮೂರಕ್ಕೇರಿಸಿಕೊಂಡಿದ್ದಾರೆ.

ಮಾಜಿ ಯೋಧ ಅಜೀತ್ ಮಾದರ ಎಂಬಾತ ಬಿಹಾರದ ಪಟಾನಾದ ಆರ್‌ಪಿಎಫ್‌(Railway Protection Force) ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೊದಲ ಪತ್ನಿ ದಾಕ್ಷಾಯಣಿ ಎಂಬವರ ಜತೆಗಿದ್ದ ಯೋಧ ಪತ್ನಿಯೊಂದಿಗಿನ ಜಗಳಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಮತ್ತೊಬ್ಬ ಮಹಿಳೆಯ ಮೊರೆ ಹೋಗಿದ್ದಾರೆ. ಬಳಿಕ 2018 ಡಿ. 31 ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜಯಶ್ರೀ ಎಂಬವರ ಜತೆ ಮದುವೆಯಾಗಿದ್ದಾರೆ.

2011ರಲ್ಲಿ ಗೋಕಾಕ ಸಬ್‌ ರಿಜಿಸ್ಟರ್‌ನಲ್ಲಿ ದಾಕ್ಷಾಯಣಿ ಎಂಬವರನ್ನು ಮದುವೆಯಾಗಿದ್ದ ಅಜಿತ್ ಮಾದರ, ಎರಡು ವರ್ಷಗಳಿಂದ ಮೊದಲ ಪತ್ನಿ ದಾಕ್ಷಾಯಣಿ ಜತೆಗಿದ್ದರು. ನಂತರ ತಾನು ಕೆಲಸ ಮಾಡುತ್ತಿದ್ದ ಪಟಾನದಲ್ಲಿ ಸೀಮಾ ಎಂಬವವರನ್ನು ಕರೆದುಕೊಂಡು ಹೋಗಿದ್ದಾರೆ.

ಇದನ್ನರಿತ ಮೊದಲ ಪತ್ನಿ ದಾಕ್ಷಾಯಣಿ ಯೋಧ ಅಜೀತ್‌ನ ಮೇಲಾಧಿಕಾರಿಗೆ ದೂರು ನೀಡಿದ್ದಾರೆ. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬರುವಂತೆ ಸೇನಾ ಅಧಿಕಾರಿಗಳು ರಜೆ ನೀಡಿ ಊರಿಗೆ ಕಳುಹಿಸಿದ್ದಾರೆ. ಆದರೆ ಮತ್ತೆ ವಾಪಸಾಗದ ಅಜಿತ್‌, ಗಂಡ ಹೆಂಡತಿಯರ ನ್ಯಾಯ ಬಗೆಹರಿಸಲು ಬಂದ ಸಮಾಜ ಸೇವಕಿ ಮತ್ತು ಜೆಡಿಎಸ್‌ನ ರಾಜ್ಯ ಮಹಿಳಾ ಘಟಕ ಕಾರ್ಯದರ್ಶಿ ಜಯಶ್ರೀ ಸೂರ್ಯವಂಶಿ ಎಂಬವರನ್ನು ಮದುವೆಯಾಗಿದ್ದಾರೆ.

ಈ ಕುರಿತು ಬೆಳಗಾವಿ ಮಹಿಳಾ ಠಾಣೆಯಲ್ಲಿ ಮೊದಲ ಪತ್ನಿ ದಾಕ್ಷಾಯಣಿ ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)