ಪತಿಯಿಂದ ಪತ್ನಿಯ ಇರಿದು ಕೊಲೆ

<ಮಂಗಳೂರು ಕೊಂಚಾಡಿ ಬಳಿ ಘಟನೆ *ಆರೋಪಿ ಪೊಲೀಸ್ ವಶ >

5ಮಂಗಳೂರು: ನಗರದ ಹೊರವಲಯದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಚಾಡಿ ಬೋರ್‌ಗುಡ್ಡೆಯಲ್ಲಿ ಶನಿವಾರ ಬೆಳಗ್ಗೆ ಪತಿಯೇ ಪತ್ನಿಯನ್ನು ಚೂರಿಯಿಂದ ಬರ್ಬರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದು, ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ಮೂಲದ ಮಂಜುಳಾ(35) ಕೊಲೆಯಾದವರು. ಅವರ ಪತಿ ಶರಣಪ್ಪ(48) ಕೊಲೆಗೈದ ಆರೋಪಿ.

ಪ್ರಕರಣದ ವಿವರ: ಬಾಗಲಕೋಟೆ ಮೂಲದ ಶರಣಪ್ಪ ಹಾಗೂ ಮಂಜುಳಾ ದಂಪತಿ ಬೋರ್‌ಗುಡ್ಡೆಯ ಮನೆಯೊಂದರಲ್ಲಿ ಕೆಲ ವರ್ಷಗಳಿಂದ ವಾಸವಿದ್ದರು. ದಂಪತಿಗೆ ನಾಲ್ವರು ಪುತ್ರಿಯರಿದ್ದು, ಒಬ್ಬಾಕೆಗೆ ಮದುವೆಯಾಗಿದೆ. ಮಂಜುಳಾ ಕೊಟ್ಟಾರದಲ್ಲಿರುವ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಶರಣಪ್ಪ ಮದ್ಯ ಸೇವನೆ ಚಟ ಹೊಂದಿದ್ದು, ಪ್ರತಿ ದಿನ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಶುಕ್ರವಾರ ರಾತ್ರಿಯೂ ದಂಪತಿ ಮಧ್ಯೆ ಜಗಳ ನಡೆದಿದೆ. ಮೂವರು ಪುತ್ರಿಯರು ಉಡುಪಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ ಇಡೀ ಶರಣಪ್ಪ ಪತ್ನಿಯೊಂದಿಗೆ ಜಗಳ ಮಾಡಿದ್ದು, ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿದ್ದ. ಆತನ ಬೆದರಿಕೆಯನ್ನು ನಿರ್ಲಕ್ಷಿಸಿದ ಮಂಜುಳಾ ಬೆಳಗ್ಗಿನ ಜಾವ ನಿದ್ದೆಗೆ ಜಾರಿದ್ದರು.

ನಿದ್ದೆಯಲ್ಲಿದ್ದಾಗ ಚೂರಿಯಿಂದ ತಿವಿದ: ಮಂಜುಳಾ ನಿದ್ದೆಯಲ್ಲಿದ್ದ ಸಂದರ್ಭ ಅವರ ತಲೆ, ಕುತ್ತಿಗೆ, ಕೈ, ಕಾಲು, ಹೊಟ್ಟೆಯ ಭಾಗಕ್ಕೆ ಶರಣಪ್ಪ ಚೂರಿಯಿಂದ ಬರ್ಬರವಾಗಿ ತಿವಿದಿದ್ದಾನೆ. ಈ ಸಂದರ್ಭ ಮಂಜುಳಾ ಬೊಬ್ಬೆ ಹಾಕಿದ್ದು, ಸ್ಥಳೀಯರು ಧಾವಿಸಿದ್ದಾರೆ. ಮಂಜುಳಾ ಮೃತಪಟ್ಟಿದ್ದು, ಕೃತ್ಯ ಎಸಗಿದ ಶರಣಪ್ಪ ಪರಾರಿಯಾಗಿದ್ದಾನೆ. ಕಾವೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಶೀಲ ಶಂಕಿಸಿ ಕೊಲೆ?: ಪತ್ನಿಗೆ ಬೇರೊಬ್ಬ ಪುರುಷನ ಜತೆ ಸಂಬಂಧವಿದೆ ಎನ್ನುವ ಅನುಮಾನದಿಂದ ಪತಿ-ಪತ್ನಿ ಮಧ್ಯೆ ಪ್ರತಿ ದಿನ ಗಲಾಟೆ ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಪತ್ನಿಯೂ ಎದುರುತ್ತರ ನೀಡಿದ್ದು, ಇದರಿಂದ ರೊಚ್ಚಿಗೆದ್ದ ಶರಣಪ್ಪ ಮಲಗಿದ್ದ ಪತ್ನಿಗೆ ಯದ್ವಾತದ್ವಾ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮಂಜುಳಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಕ್ಕಳು ಅತಂತ್ರ: ತಾಯಿ ಕೊಲೆಯಾಗಿದ್ದು, ಕೊಲೆಗೈದ ಆರೋಪಿ ತಂದೆ ಶರಣಪ್ಪ ಜೈಲು ಸೇರುವುದು ನಿಶ್ಚಿತ. ಏನೂ ತಪ್ಪು ಮಾಡದ ಮೂವರು ಹೆಣ್ಣುಮಕ್ಕಳು ಅತಂತ್ರರಾಗಿದ್ದಾರೆ.