ಆ ಗಂಡನೂ ಇಲ್ಲ, ಈ ಗಂಡನೂ ಇಲ್ಲ!

|ಸುಚೇತನಾ ನಾಯ್ಕ

ಬೆಂಗಳೂರು: ಗಂಡ ಬದುಕಿದ್ದಾಗಲೇ ಮತ್ತೋರ್ವನ ಜತೆ ಸಪ್ತಪದಿ ತುಳಿದಿದ್ದ ಮಹಿಳೆ ಕಾನೂನು ಹೋರಾಟದಲ್ಲಿ ಸೋತು ಇದೀಗ ವೃದ್ಧಾಪ್ಯದಲ್ಲಿ ಇಬ್ಬರನ್ನೂ ಕಳೆದುಕೊಂಡಿದ್ದಾಳೆ! ಪತಿ ಬದುಕಿರುವಾಗಲೇ ಇನ್ನೊಬ್ಬನನ್ನು ಮದುವೆಯಾಗಿದ್ದು ತಪ್ಪೆಂದು ತೀರ್ಪಿತ್ತು 2ನೇ ಮದುವೆಯನ್ನು ಕೋರ್ಟ್ ರದ್ದುಮಾಡಿದರೆ, ಮೊದಲ ಪತಿಗೆ ಮೋಸ ಮಾಡಿದ್ದಕ್ಕಾಗಿ ಆತನಿಗೆ ವಿಚ್ಛೇದನ ಕೊಡಿಸಿದೆ.

ಪತಿ ಮನೆ ಬಿಟ್ಟು ಹೋಗಿ ಎಷ್ಟೇ ವರ್ಷವಾಗಿದ್ದರೂ ಅವನು ಸತ್ತಿದ್ದಾನೆಂದು ಸಾಬೀತು ಮಾಡುವವರೆಗೆ ಇನ್ನೊಂದು ಮದುವೆಯಾಗುವುದು ‘ಭಾರತೀಯ ವಿವಾಹ ಕಾಯ್ದೆ-1955’ ಅಡಿ ತಪು್ಪ ಎಂಬ ಅಭಿಪ್ರಾಯದೊಂದಿಗೆ ಪಂಜಾಬ್-ಹರಿಯಾಣ ಹೈಕೋರ್ಟ್ ಈ ಆದೇಶ ನೀಡಿದೆ. ಹರಿಯಾಣದ ಮಹೇಂದ್ರಗಢ ಮಹಿಳೆ ಹೆಸರು ಸವರನ್​ಜೀತ್ ಕೌರ್. 1975ರಲ್ಲಿ ಬಲಬೀರ್ ಸಿಂಗ್ ಎಂಬಾತನ ಜೊತೆ ಈಕೆಗೆ ವಿವಾಹವಾಗಿತ್ತು. ಕುಡುಕನಾದ ಗಂಡನ ಜೊತೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಒಂದು ದಿನ ಜಗಳ ವಿಕೋಪಕ್ಕೆ ಹೋದಾಗ ಬಲಬೀರ್ (1985)ಮನೆ ಬಿಟ್ಟು ಹೋದ. ಅದಾಗಲೇ ಗಂಡು ಮಗುವಿನ ತಾಯಿಯಾಗಿದ್ದ ಸವರನ್​ಜೀತ್, ಗಂಡ ಮನೆ ಬಿಟ್ಟಾಗ ತುಂಬು ಗರ್ಭಿಣಿ. ಎರಡನೆಯ ಮಗು ಹುಟ್ಟಿದ ಮೇಲೆ ಆಕೆ ತಾನು ವಿಧವೆ ಎಂದು ಸುಳ್ಳು ಹೇಳಿ ಅವತಾರ್ ಸಿಂಗ್ ಎಂಬಾತನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಬಳಿಕ ಅವತಾರ್ ಸಿಂಗ್​ನನ್ನೇ ಮದುವೆಯಾದಳು. 10 ವರ್ಷ ನಾಪತ್ತೆಯಾಗಿದ್ದ ಬಲಬೀರ್, ಹೆಂಡತಿಗೆ ಇನ್ನೊಂದು ಮದುವೆಯಾಗಿದೆ ಎಂದು ತಿಳಿಯುತ್ತಲೇ ಪ್ರತ್ಯಕ್ಷನಾದ. ತಾನು ಬದುಕಿರುವಾಗಲೇ ಹೆಂಡತಿ ಇನ್ನೊಂದು ಮದುವೆಯಾಗಿದ್ದಾಳೆ ಎಂದು ಆಕೆ ವಿರುದ್ಧ ದೂರು ದಾಖಲಿಸಿದ. ಜತೆಗೆ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೊರೆ ಹೋದ.ಇನ್ನೊಂದೆಡೆ, ಮೊದಲ ಗಂಡ ಬದುಕಿದ್ದರೂ ವಿಧವೆ ಎಂದು ಸವರನ್ ಸುಳ್ಳು ಹೇಳಿದ್ದರು.

ಇವರ ವಿರುದ್ಧ ಎರಡನೆಯ ಗಂಡ ಅವತಾರ್ ದೂರು ದಾಖಲಿಸಿದ. ತಮ್ಮ ಈ ಮದುವೆ ಅಸಿಂಧು ಎಂದು ಘೋಷಿಸುವಂತೆ ಕೋರ್ಟ್ ಮೊರೆ ಹೋದ. ಎರಡೂ ಕೇಸುಗಳ ವಿಚಾರಣೆ ನಡೆಸಿದ ಕೌಟುಂಬಿಕ ಕೋರ್ಟ್, ಎರಡನೇ ಮದುವೆ ಕಾನೂನುಬಾಹಿರ ಎಂದು ಹೇಳಿತು. ಆದರೆ ಮೊದಲ ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು.

ಎರಡನೆಯ ಮದುವೆ ಕಾನೂನುಬಾಹಿರ ಎಂದು ಕೋರ್ಟ್ ತೀರ್ಪು ನೀಡಿದ್ದನ್ನು ಪ್ರಶ್ನಿಸಿ ಸವರನ್​ಜೀತ್ ಹೈಕೋರ್ಟ್ ಮೊರೆಹೋದರೆ, ವಿಚ್ಛೇದನ ಅರ್ಜಿ ವಜಾ ಮಾಡಿದ್ದ ಆದೇಶವನ್ನು ಬಲಬೀರ ಸಿಂಗ್ ಪ್ರಶ್ನಿಸಿದ. ಪತಿ/ಪತ್ನಿ ಏಳು ವರ್ಷ ನಾಪತ್ತೆಯಾಗಿದ್ದರೆ ಅವರು ಸತ್ತಿದ್ದಾರೆ ಎಂದು ಭಾವಿಸಿ ಮತ್ತೊಂದು ಮದುವೆಗೆ ಅವಕಾಶ ಇದೆ. ಹಾಗಾಗಿ ತಾನು ಕಾನೂನು ಪಾಲನೆ ಮಾಡಿದ್ದೇನೆ ಎನ್ನುವುದು ಸವರನ್​ಜೀತ್ ವಾದವಾಗಿತ್ತು.

ಕೋರ್ಟ್ ಹೇಳಿದ್ದೇನು?

ಮೊದಲ ಗಂಡ ಬದುಕಿರುವುದು ತಿಳಿದಿದ್ದರೂ ಸವರನ್​ಜೀತ್ ಎರಡನೇ ಮದುವೆಯಾಗಿರುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಜತೆಗೆ, ಎರಡನೇ ಮದುವೆಯಾಗಿ ಮೊದಲ ಗಂಡನಿಗೆ ಮೋಸ ಮಾಡಿರುವುದು ಆತನಿಗೆ ನೀಡಿರುವ ‘ಮಾನಸಿಕ ಕ್ರೌರ್ಯ‘ ಎಂದು ಹೇಳಿ ವಿಚ್ಛೇದನ ಅರ್ಜಿಯನ್ನೂ ಮಾನ್ಯ ಮಾಡಿತು.