ಪತ್ನಿ ಚೆಕ್ ಬೌನ್ಸ್ ಮಾಡಿಸಿದ ಪತಿ!

ಉಡುಪಿ: ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಆಕೆಯ ಬ್ಯಾಂಕ್ ಚೆಕ್‌ಗಳನ್ನು ಬೌನ್ಸ್ ಮಾಡಿಸಿ ಜೈಲಿಗಟ್ಟಲು ಪತಿಯೇ ಕ್ರಿಮಿನಲ್ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಪೆರಂಪಳ್ಳಿ ನಿವಾಸಿ ಮಹಮ್ಮದ್ ಶರೀಫ್ ಅಲಿ(32) ಎಂಬಾತ ಕೇರಳ ತಲಶ್ಶೇರಿಯ ಜಂಶೀನಾ(28) ಎಂಬುವರನ್ನು 2013ರಲ್ಲಿ ವಿವಾಹವಾಗಿದ್ದ. ಚಾಲಕ ವೃತ್ತಿ ಮಾಡಿಕೊಂಡಿರುವುದಾಗಿ ಹೇಳಿದ್ದ ಆತ, ವಿವಾಹ ಸಂದರ್ಭ ವರದಕ್ಷಿಣೆಯಾಗಿ 8 ಲಕ್ಷ ರೂ.ಮೌಲ್ಯದ 240 ಗ್ರಾಂ ಚಿನ್ನಾಭರಣ ಪಡೆದಿದ್ದ. ವಿವಾಹ ಬಳಿಕ ನಿತ್ಯ ಮದ್ಯಸೇವಿಸಿ ಬಂದು ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ತವರಿಗೆ ಹೋಗಿ ಹಣ ತರುವಂತೆ ಒತ್ತಾಯಿಸುತ್ತಿದ್ದ. ಬೇಸತ್ತ ಪತ್ನಿ ಜಂಶೀನಾ ವಿವಿಧ ಸಂದರ್ಭಗಳಲ್ಲಿ ಒಟ್ಟು 6 ಲಕ್ಷ ರೂ.ಗಳನ್ನು ಪತಿಗೆ ನೀಡಿದ್ದರು.

ಎಲ್ಲಿಯೂ ಸರಿಯಾಗಿ ಕೆಲಸ ಮಾಡದ ಶರೀಫ್, ಎರಡು ಬಾರಿ ಗಲ್ಫ್‌ಗೆ ತೆರಳಿ ಕೆಲವೇ ದಿನದಲ್ಲಿ ವಾಪಸಾಗಿದ್ದ. ಇದರ ಎಲ್ಲ ಖರ್ಚು ವೆಚ್ಚಗಳನ್ನು ಜಂಶೀನಾರ ತಾಯಿ ಭರಿಸಿದ್ದರು. ಈ ಮಧ್ಯೆ, ಶರೀಫ್ ತಾಯಿ ಹಲೀನಾಬಿ ಅವರು ಜಂಶೀನಾ ಹೆಸರಿನಲ್ಲಿ ಎರಡು ಖಾಸಗಿ ಫೈನಾನ್ಸ್, ಒಂದು ಸಹಕಾರಿ ಸಂಘದಲ್ಲಿ ಲಕ್ಷಾಂತರ ರೂ. ಸಾಲ ತೆಗೆದಿದ್ದರು. ಇದಕ್ಕೆ ಶರೀಫ್ ತಂದೆ ಮೂಸಾ ಖಾದರ್ ಸಹಕಾರ ನೀಡಿದ್ದರು. ಜಂಶೀನಾಗೆ 2016ರಲ್ಲಿ ದೊರೆತ ಅಪಘಾತದ ವಿಮೆಯ 35 ಸಾವಿರ ರೂ. ಮೊತ್ತವನ್ನು ಶರೀಫ್ ಲಪಟಾಯಿಸಿದ್ದಾನೆ. ಪತಿಯ ಹಿಂಸೆ, ಕುಕೃತ್ಯಗಳನ್ನು ತಾಳದ ಜಂಶೀನಾ 4 ತಿಂಗಳಿಂದ ಸಹೋದರಿ ಸಹಕಾರದಿಂದ ಆತ್ರಾಡಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾಳೆ ಎಂದು ಶ್ಯಾನುಭಾಗ್ ತಿಳಿಸಿದರು.
ಸಮ್ಮಾನ್ ಕೌನ್ಸೆಲಿಂಗ್ ಸೆಂಟರ್‌ನ ಸಲಾವುದ್ದೀನ್, ತಾಯಿ ಸಫಿಯಾ, ಸಹೋದರಿ ಸಲ್ಮಾ, ಭಾವ ಮಹಮ್ಮದ್ ರಫೀಕ್, ಸೋದರ ಮಾವ ನಾಸೀರ್ ಸುದ್ದಿಗೋಷ್ಠಿಯಲ್ಲಿದ್ದರು.

ಜಂಶೀನಾಳ ಮೇಲಿದೆ ಚೆಕ್‌ಬೌನ್ಸ್ ಕೇಸು: ಪತಿ ಶರೀಫ್ ಹಲವು ಕಡೆ ಬೃಹತ್ ಮೊತ್ತದ ಸಾಲ ಮಾಡಿ, ಇದರಿಂದ ಪಾರಾಗಲು ಪತ್ನಿ ಸಹಿ ಹಾಕಿದ ಚೆಕ್ ನೀಡಿದ್ದ. ಜಂಶೀನಾ ಹೆಸರಿನಲ್ಲಿದ್ದ ಬ್ಯಾಂಕ್ ಚೆಕ್‌ಗಳಿಗೆ ಆಕೆಗೆ ದೈಹಿಕ ಹಿಂಸೆ ನೀಡಿ ಸಹಿ ಹಾಕಿಸಿಕೊಂಡು, 6 ಲಕ್ಷ ಮೌಲ್ಯದ 3 ಚೆಕ್‌ಗಳನ್ನು ಸಾಲ ಕೊಟ್ಟವರಿಗೆ ನೀಡಿದ್ದ. ಖಾತೆಯಲ್ಲಿ ಹಣ ಇಲ್ಲದ ಕಾರಣ ಎಲ್ಲ ಚೆಕ್‌ಗಳು ಬೌನ್ಸ್ ಆಗಿವೆ. ಜಂಶೀನಾ ಮೇಲೆ ಚೆಕ್‌ಬೌನ್ಸ್ ಕ್ರಿಮಿನಲ್ ದೂರು ದಾಖಲಾಗಿದೆ. ಶರೀಫ್ ಬಳಿ ಜಂಶೀನಾ ಸಹಿ ಇರುವ 10ರಿಂದ 12 ಚೆಕ್ ಇದೆ. ಆಕೆ ಒಪ್ಪಿಗೆ ಇಲ್ಲದೆ ಚೆಕ್‌ಗಳಿಗೆ ಸಹಿ ಪಡೆಯಲಾಗಿದ್ದು, ಈ ಚೆಕ್‌ಗಳನ್ನು ಯಾರೂ ಪಡೆಯಬಾರದು. ಪತಿಯ ತಪ್ಪಿಗೆ ನಿರಪರಾಧಿ ಜಂಶೀನಾಗೆ ಶಿಕ್ಷೆಯಾಗಬಾರದು ಎಂದು ಶ್ಯಾನುಭಾಗ್ ಮನವಿ ಮಾಡಿದ್ದಾರೆ.

ಒತ್ತಡಕ್ಕೊಳಗಾಗಿ ತಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಮಾ.ಹ.ರ.ಪ್ರತಿಷ್ಠಾನ, ಸಮ್ಮಾನ್ ಕೌನ್ಸೆಲಿಂಗ್ ಸೆಂಟರ್ ಸಹಾಯದಿಂದ ಶರೀಫ್ ಮೇಲೆ ಕ್ರಿಮಿನಲ್ ಷಡ್ಯಂತ್ರ, ವರದಕ್ಷಿಣೆ ಹಿಂಸೆ, ದೈಹಿಕ ಹಿಂಸೆ, ಬ್ಯಾಂಕಿಂಗ್ ಅವ್ಯವಹಾರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ.
– ಜಂಶೀನಾ, ಸಂತ್ರಸ್ತೆ