ಆನೇಕಲ್ : ತಾಲೂಕಿನ ರಾಚಮಾರನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ ಪತಿ ನಂತರ ಠಾಣೆಗೆ ಬಂದು ಶರಣಾಗಿದ್ದಾನೆ.
ಮೈಸೂರು ಮೂಲದ ಅನಿತಾ (28) ಮೃತೆ. ಬಾಬು(32) ಬಂಧಿತ ಆರೋಪಿ. ಅತ್ತಿಬೆಲೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರಣಾಂತಿಕ ಹಲ್ಲೆ ಮಾಡಿದ್ದ: ಪತ್ನಿ 3 ತಿಂಗಳು ಮನೆ ಬಿಟ್ಟು ಬೇರೊಬ್ಬನ ಜತೆ ಓಡಿ ಹೋಗಿದ್ದಳೆಂಬ ಕಾರಣಕ್ಕೆ ಬಾಬು ಭಾನುವಾರ ರಾತ್ರಿ ಅನಿತಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದರಿಂದ ಅಸ್ವಸ್ಥಗೊಂಡು ಮಲಗಿದ್ದ ಅನಿತಾಳನ್ನು ಸೋಮವಾರ ಬೆಳಗ್ಗೆ ಮಾತನಾಡಿಸಿದ ಪತಿ ಆಕೆಗೆ ಉಪಾಹಾರ ನೀಡಿ, ಸಂತೈಸಿದ್ದ. ಆದರೆ ತೀವ್ರ ಪೆಟ್ಟಿನಿಂದ ಆಕೆ ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ. ಸೋಮವಾರ ರಾತ್ರಿ ಇಡೀ ಪತ್ನಿಯ ಮೃತ ದೇಹದೊಂದಿಗೆ ಕಾಲ ಕಳೆದ ಬಾಬು, ಮಂಗಳವಾರ ಬೆಳಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಓಡಿಹೋಗಿದ್ದ ಅನಿತಾ : ಅನಿತಾ ಕಳೆದ ಜನವರಿಯಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಳು. ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಮಾರ್ಚ್ನಲ್ಲಿ ಆಕೆಯನ್ನು ಪತ್ತೆ ಹಚ್ಚಿ ಕರೆತಂದಿದ್ದರು. ಪತಿ ಮನೆಗೆ ವಾಪಸ್ ಬಂದಾಗಿನಿಂದ ಪತ್ನಿ&ಪತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಆರೋಪಿ ಬಾಬು ಎರಡನೇ ಪತ್ನಿ ಸುಶ್ಮಿತಾ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಅಡಿಷನಲ್ ಎಸ್ಪಿ ನಾಗೇಶ್ ಕುಮಾರ್, ಆನೇಕಲ್ ಉಪ ವಿಭಾಗ ಡಿವೈಎಸ್ಪಿ ಮೋಹನ್ ಹಾಗೂ ಅತ್ತಿಬೆಲೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀೆಗೆ ರವಾನಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಬ್ಬರನ್ನು ಮದುವೆಯಾಗಿದ್ದ ಆರೋಪಿ : ಆರೋಪಿ ಬಾಬು 9 ವರ್ಷದ ಹಿಂದೆ ಇಬ್ಬರು ಯುವತಿಯರನ್ನು ಪ್ರೀತಿಸಿ ಇಬ್ಬರನ್ನೂ ಒಂದೇ ಮಂಟಪದಲ್ಲಿ ಮದುವೆಯಾಗಿದ್ದ. ಮೊದಲ ಪತ್ನಿ ಅನಿತಾಗೆ ಇಬ್ಬರು ಹಾಗೂ ಎರಡನೇ ಪತ್ನಿಗೂ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ಮೊದಲನೇ ಪತ್ನಿ ಅನಿತಾ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆ ಮೇರೆಗೆ ಆಗಾಗ ಜಗಳವಾಡುತ್ತಿದ್ದ. ಭಾನುವಾರ ಕೂಡ ಜಗಳವಾಡಿದ್ದು, ಮಾರಣಾಂತಿಕ ಹಲ್ಲೆ ನಡೆಸಿದ್ದ.

ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪತ್ನಿಗೆ ಹೊಡೆದಿದ್ದಾನೆ. ಆಕೆ ಹಲ್ಲೆಯಿಂದಾಗಿ ಅಸ್ವಸ್ಥಗೊಂಡು ಒಂದು ದಿನದ ಬಳಿಕ ಮೃತಪಟ್ಟಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಆರೋಪಿಯ ತನಿಖೆ ಮಾಡುತ್ತಿದ್ದು, ಇನ್ನಷ್ಟು ಮಾಹಿತಿ ಗೊತ್ತಾಗಬೇಕಿದೆ.
> ನಾಗೇಶ್ಕುಮಾರ್ ಬೆಂ. ಗ್ರಾಮಾಂತರ ಎಎಸ್ಪಿ