ಮೊಬೈಲ್​ನಲ್ಲಿ ‘ಪಾಕಿಸ್ತಾನಿ ಡ್ರಾಮಾ’ ಶೋ ನೋಡಿದ ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪತಿ

ಪುಣೆ: ಮೊಬೈಲ್​ನಲ್ಲಿ ‘ಪಾಕಿಸ್ತಾನಿ ಡ್ರಾಮಾ’ ಎಂಬ ಶೋ ನೋಡುತ್ತಿದ್ದ ಪತ್ನಿಯ ಮೇಲೆ ಪತಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಸಲಿಸ್ಬರಿ ಪಾರ್ಕ್ ಪ್ರದೇಶದ ನಿವಾಸಿಯಾಗಿರುವ ಆಸಿಫ್​ ಸತ್ತರ್​ ನಯಾಬ್​ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯೇ ನೀಡಿರುವ ದೂರಿನ ಅನ್ವಯ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ.

ಬೆಳಗ್ಗೆ ಮಹಿಳೆ ತನ್ನ ಮಗನನ್ನು ಹಾಲು ತೆಗೆದುಕೊಂಡು ಬರಲು ಅಂಗಡಿಗೆ ಕಳಿಸಿದ್ದಳು. ಆದರೆ ಹಾಲು ತಂದ ಚೀಲ ಸ್ವಲ್ಪ ಹಾಳಾಗಿದ್ದರಿಂದ ಮಗನಿಗೆ ಗದರಿಸಿದ್ದಾಳೆ. ಅದನ್ನು ನೋಡಿದ ಆಸಿಫ್​ ಸತ್ತರ್​ ಪತ್ನಿಯ ಜತೆ ಜಗಳ ತೆಗೆದಿದ್ದಾರೆ. ಇವರಿಬ್ಬರ ನಡುವಿನ ಜಗಳ ಸಂಜೆವರೆಗೂ ಮುಂದುವರಿದು ಸಂಜೆ ಆಸಿಫ್​ ಆಫೀಸ್​ನಿಂದ ಬರುತ್ತಿದ್ದಂತೆ ಮಹಿಳೆ ಬೆಡ್​ರೂಂಗೆ ತೆರಳಿ ಮೊಬೈಲ್​ನಲ್ಲಿ ಪಾಕಿಸ್ತಾನಿ ಡ್ರಾಮಾ ಶೋ ವೀಕ್ಷಿಸುತ್ತ ಕುಳಿತಿದ್ದಾಳೆ. ಅದನ್ನು ನೋಡಿದ ಪತಿ ಚಾಕುವಿನಿಂದ ಹಲ್ಲೆ ನಡೆಸಿದ್ದು ಪತ್ನಿಯ ಬಲಗೈ ಹೆಬ್ಬೆರಳು ಮುರಿದಿದೆ.
ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.