More

    ಸಂಪುಟ ಸಂಕಟದ ಸ್ವಾಗತ; ಬೆಂಗಳೂರಿಗೆ ಮರಳಿದ ದಿನವೇ ಸಿಎಂಗೆ ಇಕ್ಕಟ್ಟು

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾವೋಸ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ ಬೆನ್ನಲ್ಲೇ ಸಂಪುಟ ವಿಸ್ತರಣೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ರಾಜಕೀಯ ಚಟುವಟಿಕೆಗಳೂ ಬಿರುಸುಗೊಂಡಿವೆ. ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ‘ಮಂತ್ರಿಗಿರಿ’ ಆಕಾಂಕ್ಷಿಗಳ ಒತ್ತಡದಿಂದ ಹೊರಬಂದು ಐದು ದಿನ ನೆಮ್ಮದಿಯಾಗಿದ್ದ ಸಿಎಂಗೆ ಶುಕ್ರವಾರ ಮಧ್ಯಾಹ್ನ ರಾಜಧಾನಿಗೆ ಕಾಲಿಡುತ್ತಿದ್ದಂತೆಯೇ ಸಂಪುಟ ಸಂಕಟ ಎದುರಾಯಿತು. ಇಷ್ಟು ದಿನ ವಿಸ್ತರಣೆ ವಿಳಂಬಕ್ಕೆ ಧನುರ್ವಸ, ಸಂಕ್ರಾಂತಿ, ದಾವೋಸ್ ಪ್ರವಾಸ ಎಂಬ ನೆಪಗಳನ್ನು ಹೊಂದಿದ್ದ ಸಿಎಂ ಇದೀಗ ಯಾವುದೇ ಕಾರಣ ಮುಂದಿಡಲಾಗದಂತಹ ಸ್ಥಿತಿಯಲ್ಲಿದ್ದಾರೆ.

    ಕೊಟ್ಟ ಮಾತನ್ನು ಉಳಿಸಿಕೊಳ್ಳುವ ತವಕದಲ್ಲಿರುವ ಸಿಎಂ ಮಾಸಾಂತ್ಯದೊಳಗೆ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದಾರಾದರೂ ದೆಹಲಿ ವರಿಷ್ಠರು ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿವೆ. ಅದರಿಂದಾಗಿಯೇ ಆಕಾಂಕ್ಷಿಗಳ ಎದೆಬಡಿತವೂ ಹೆಚ್ಚಾಗಿದೆ. ದಾವೋಸ್ ಪ್ರವಾಸಕ್ಕೆ ಮುನ್ನ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಷಾ ಕೂಡ ಸಂಪುಟ ವಿಸ್ತರಣೆಗೆ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ಹೀಗಾಗಿ ಇದೀಗ ಮತ್ತೆ ವರಿಷ್ಠರ ನಿರ್ಧಾರದತ್ತ ನೋಡಬೇಕಿದೆ.

    ದೆಹಲಿ ಚುನಾವಣೆ ನೆಪ: ಈಗ ಸಂಪುಟ ವಿಸ್ತರಿಸಿದರೆ ಅದರಿಂದ ಉಂಟಾಗುವ ರಾಜಕೀಯ ಬದಲಾವಣೆ, ಬೆಳವಣಿಗೆಗಳು ದೆಹಲಿ ಚುನಾವಣೆ ಮೇಲೂ ಪರಿಣಾಮ ಬೀರಬಹುದೆಂಬ ಆತಂಕವಿದೆ. ಹೀಗಾಗಿಯೇ ದೆಹಲಿ ಚುನಾವಣೆ ಮುಗಿದ ಬಳಿಕ (ಫೆ.10 ) ಸಂಪುಟ ವಿಸ್ತರಣೆ ಮಾಡುವುದು ಸೂಕ್ತ ಎನ್ನುವ ಸಲಹೆಯನ್ನು ವರಿಷ್ಠರು ಸಿಎಂಗೆ ರವಾನಿಸಿದ್ದಾರೆ. ಆದರೆ, ಅದಕ್ಕೆ ಒಪ್ಪದ ಸಿಎಂ ಸಂಪುಟ ವಿಸ್ತರಣೆ ಮಾಡಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವುದರಿಂದ ಮುಂದೇನಾಗುವುದೆಂಬ ಕುತೂಹಲ ಬಿಜೆಪಿಯಲ್ಲಿ ಇಮ್ಮಡಿಗೊಂಡಿದೆ.

    ರಾಜಕೀಯ ಮಾಹಿತಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸಿದ ಸಚಿವ ಸಂಪುಟ ಸಹೋದ್ಯೋಗಿಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ರಾಜಕೀಯ ಬೆಳವಣಿಗೆಗಳ ಮಾಹಿತಿ ಪಡೆದುಕೊಂಡರು. ಧವಳಗಿರಿ ನಿವಾಸಕ್ಕೆ ಸಿಎಂ ಬಂದ ಮೇಲೆ ಸಚಿವ ಸ್ಥಾನದ ಆಕಾಂಕ್ಷಿಗಳು ಎಡತಾಕಲು ಪ್ರಾರಂಭಿಸಿದರು. ಶಾಸಕ ಬಿ.ಸಿ.ಪಾಟೀಲ್ ಕೂಡ ಸಿಎಂ ಜತೆ ರ್ಚಚಿಸಿದರು.

    ಎಷ್ಟು ಜನರಿಗೆ ಚಾನ್ಸ್?

    ರಾಜೀನಾಮೆ ಕೊಟ್ಟ ಶಾಸಕರ ಪೈಕಿ 11 ಜನ ಗೆದ್ದಿದ್ದಾರೆ. ಅಷ್ಟೂ ಜನರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಾಗಿದೆ. ಆದರೆ ಬಿಜೆಪಿ ವರಿಷ್ಠರು 6 ಜನರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಕೊಡಿ, ಇನ್ನುಳಿದ 5 ಜನರಿಗೆ ನಿಗಮ ಮಂಡಳಿ ಸ್ಥಾನ ನೀಡಿ ಎಂಬ ಸೂಚನೆ ನೀಡಿದ್ದಾರೆ ಎಂಬ ಮಾತುಗಳೂ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಸೋತವರಿಗೆ ಯಾವುದೇ ಅಧಿಕಾರ ಇಲ್ಲವೆಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಇವರನ್ನೆಲ್ಲ ಹೇಗೆ ಸಂಭಾಳಿಸಲಾಗುತ್ತದೆ ಎಂಬ ಪ್ರಶ್ನೆ ಎದ್ದಿದೆ.

    ಸಂಪುಟ ವಿಸ್ತರಣೆಗೆ ಅಮಿತ್ ಷಾ ಈಗಾಗಲೇ ಒಪ್ಪಿಗೆ ಕೊಟ್ಟಿರುವ ಕಾರಣ ದೆಹಲಿಗೆ ಹೋಗುವುದಿಲ್ಲ. ಮೂರ್ನಾಲ್ಕು ದಿನದೊಳಗೆ ಸಂಪುಟ ವಿಸ್ತರಣೆ ಮಾಡಲಾಗುವುದು.

    | ಯಡಿಯೂರಪ್ಪ ಸಿಎಂ

    ಅಂದು ಕೈ ಹಿಡಿದವರ ಪಟ್ಟು

    ‘ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಬರಲು ಹಾಗೂ ಯಡಿಯೂರಪ್ಪ ಸಿಎಂ ಆಗಲು ನಾವು ಕಾರಣ. ಆದ್ದರಿಂದ ಅಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಜನರನ್ನು ಸಚಿವರನ್ನಾಗಿಸಬೇಕು, ಫೆ.1 ರೊಳಗೆ ನಾವೆಲ್ಲ ಸಂಪುಟದಲ್ಲಿರಬೇಕು’ ಎಂದು ಈ ಶಾಸಕರು ಪಟ್ಟು ಹಿಡಿದಿರುವುದು ಸಿಎಂ ಜತೆಗೆ ಬಿಜೆಪಿಗೂ ತಲೆನೋವು ತರಿಸಿದೆ. ಇದ್ದ ಸಚಿವ ಸ್ಥಾನಗಳೆಲ್ಲವೂ ಅವರಿಗೇ ಸಿಕ್ಕಲ್ಲಿ ಬಿಜೆಪಿಯಲ್ಲಿರುವ ನಮ್ಮ ಗತಿಯೇನು? ಎನ್ನುವುದು ಪಕ್ಷದೊಳಗಿನ ಸಚಿವಾಕಾಂಕ್ಷಿಗಳ ಪ್ರಶ್ನೆಯಾಗಿದೆ. ಇವರೆಲ್ಲರ ಪ್ರಶ್ನೆಗಳಿಗೆ ಹೈಕಮಾಂಡ್ ಮೌನವೇ ಉತ್ತರವಾಗಿದೆ.

    ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಟಿಕೆಟ್ ತಪ್ಪಿದಾಗಲೇ ಎಂಎಲ್​ಸಿ ಮಾಡ್ತೀನಿ ಅಂತ ಹೇಳಿದ್ದರು. ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿ, ಸಚಿವನನ್ನಾಗಿ ಮಾಡಲಿ.

    | ಆರ್.ಶಂಕರ್ ಸಚಿವ ಸ್ಥಾನದ ಆಕಾಂಕ್ಷಿ

    ಹದಿನೇಳು ಜನ ಶಾಸಕರು ರಾಜೀನಾಮೆ ಕೊಟ್ಟಿದ್ದು ಮೈತ್ರಿ ಸರ್ಕಾರ ಪತನವಾಗಲು ಕಾರಣ. ಇಲ್ಲದಿದ್ದರೆ ಬಿಜೆಪಿ ಸರ್ಕಾರ ಬರಲು, ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅಂದು ತ್ಯಾಗ ಮಾಡಿದ 17 ಜನರನ್ನು ಸಚಿವರನ್ನಾಗಿ ಮಾಡಲೇಬೇಕು.

    | ಎಚ್.ವಿಶ್ವನಾಥ್ ಮಾಜಿ ಶಾಸಕ

    ಸಿಎಂ ಭೇಟಿ ಮಾಡಿ ಶುಭಾಶಯ ಕೋರಲು ಬಂದಿದ್ದೆ. ತಿಂಗಳಾಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅಗತ್ಯ ಬಿದ್ದರೆ ದೆಹಲಿಗೆ ಹೋಗುವುದಾಗಿಯೂ ಹೇಳಿದ್ದಾರೆ. ನಮಗೆ ಯಡಿಯೂರಪ್ಪ ಮೇಲೆ ವಿಶ್ವಾಸ ಇದೆ.

    | ಬಿ.ಸಿ. ಪಾಟೀಲ್ ಶಾಸಕ

    ಯಾರಿಗಿಲ್ಲ ಚಾನ್ಸ್

    ಕೆಲವರನ್ನು ಕೈ ಬಿಟ್ಟು ಪಕ್ಷದ ಕೆಲವರನ್ನು ಸೇರಿಸಿಕೊಂಡು ಸಂಪುಟ ಪುನಾರಚನೆ ಮಾಡಲಾಗುತ್ತದೆ ಎನ್ನಲಾಗುತ್ತಿದೆಯಾದರೂ ಯಾರನ್ನು ಕೈಬಿಡಬೇಕು ಎಂಬುದು ಗೊಂದಲದ ಗೂಡಾಗಿರುವ ಪರಿಣಾಮ ಸದ್ಯ ಆ ಪ್ರಯತ್ನಕ್ಕೆ ಕೈ ಹಾಕಲಾರರೆಂಬ ಮಾತೂ ಇದೆ. ಎರಡು ಡಜನ್​ಗಿಂತ ಹೆಚ್ಚಿನ ಆಕಾಂಕ್ಷಿಗಳು ಸಂಪುಟ ಸೇರಲು ಕಾತುರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts