ನವಿಲುತೀರ್ಥದಿಂದ ನೀರು ಹರಿಸಿ

ಹುನಗುಂದ: ಮಲಪ್ರಭಾ ನದಿ ಹಾಗೂ ಕೂಡಲಸಂಗಮಕ್ಕೆ ನವಿಲುತೀರ್ಥದಿಂದ ನೀರು ಹರಿಸಿ ಜನ-ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ನದಿ ತೀರದ ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಬಸನಗೌಡ ಬೇವೂರ ಮಾತನಾಡಿ, ಮಲಪ್ರಭಾ ಮತ್ತು ಕೃಷ್ಣಾ ತೀರದ ಗ್ರಾಮಗಳಲ್ಲಿ ನೀರಿನ ತತ್ವಾರವಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಎಲ್ಲ ಬ್ಯಾರೇಜ್‌ಗಳಿಗೆ ನವಿಲುತೀರ್ಥದಿಂದ ನೀರು ತುಂಬಿಸಿದ್ದಾರೆ. ಆದರೆ, ನಮ್ಮ ತಾಲೂಕಿನ ರೈತರು ನೀರಿಲ್ಲದೆ ಕಷ್ಟ ಅನುಭವಿಸುತ್ತಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ. ನವಿಲುತೀರ್ಥದ ನೀರನ್ನು ಕೂಡಲಸಂಗಮದವರೆಗೂ ಹರಿಸಬೇಕೆಂದು ಒತ್ತಾಯಿಸಿದರು.

ಕರವೇ ನಗರ ಘಟಕ ಅಧ್ಯಕ್ಷ ಶರಣಪ್ಪ ಗಾಣಿಗೇರ, ಗುರುರಾಜ ರೇವಡಿ, ಹುಸೇನಸಾಬ ಸಂದಿಮನಿ, ಕೃಷ್ಣಾ ಜಾಲಿಹಾಳ, ಶಿವಬಸಪ್ಪ ದಾದ್ಮಿ, ಎನ್.ಸಿ. ಗೌಡರ, ಸಂಗಣ್ಣ ನಾಲತವಾಡ, ಜಗದೀಶ ಕಾಮಾ, ಈಶ್ವರ ರೇಶ್ಮಿ, ಪಾಪಣ್ಣ ಬಾರಡ್ಡಿ, ಬಸವರಾಜ ಹಾಲವರ, ಶಿವಲಿಂಗಪ್ಪ ನಾಲತವಾಡ, ಮಹಾಂತೇಶ ಹಾಲವರ, ಬಸವರಾಜ ಬೇವೂರ, ಮಲ್ಲಣ್ಣ ಹಂಚಿನಾಳ, ಸಿದ್ದನಗೌಡ ಪಾಟೀಲ, ರಮೇಶ ಚಿತ್ತವಾಡಗಿ ಸೇರಿದಂತೆ ಚಿತ್ತರಗಿ, ಗಂಗೂರ, ಚಿಕ್ಕಮಾಗಿ, ಮಳಗಾವಿ ಗ್ರಾಮಗಳ ರೈತರು ಇದ್ದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಿಂದಾಲ್ ಕಂಪನಿಗೆ ವರ್ಷದುದ್ದಕ್ಕೂ ನೀರು ಹರಿಸುತ್ತಾರೆ. ಆದರೆ, ಪಕ್ಕದಲ್ಲಿಯೇ ನದಿ ತೀರದ ಜನರಿಗೆ ನೀರು ಕೊಡುತ್ತಿಲ್ಲ. ಕೂಡಲೇ ನವಿಲುತೀರ್ಥದಿಂದ ನೀರು ಹರಿಸಬೇಕು.
– ಮಲ್ಲಪ್ಪ ಬಾಲರಡ್ಡಿ ರೈತ ಮುಖಂಡ