ಗಮನ ಸೆಳೆದ ಗ್ರಾಮೀಣ ದಸರಾ

ಹುಣಸೂರು: ಕ್ವಿಂಟಾಲ್ ತೂಕದ ಕಲ್ಲುಗುಂಡನ್ನು ಎತ್ತಿ ಎಸೆದ ಕಲ್ಕುಣಿಕೆ ಕಲ್ಲು ನಾಗೇಶ…ನೀರು ತುಂಬಿದ ಬಿಂದಿಗೆ ಹೊತ್ತು ಓಡಿದ ಲಲನಾ ಮಣಿಯರು.. ಓಡುವ ಭರದಲ್ಲಿ ಬಿದ್ದು ಎದ್ದು ಮರಳಿ ಯತ್ನವ ಮಾಡಿದ ಪರಿ….ಗೊಬ್ಬರದ ಮೂಟೆ ಹೊತ್ತು ಓಡಿದ ಪುರುಷ ಕಲಿಗಳು..ಸೈಕಲ್ ನಿಧಾನವಾಗಿ ಓಡಿಸಲಾಗದೆ ಬಿದ್ದ ಕಾಲೇಜು ಯುವಕರು..

ಪಟ್ಟಣದ ಮುನೇಶ್ವರ ಕಾವಲ್ ಮೈದಾನಲ್ಲಿ ಗ್ರಾಮೀಣ ದಸರಾ ಕ್ರೀಡಾಕೂಟ-2018ರ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿನ ಸ್ವಾರಸ್ಯಕರ ಚಿತ್ರಣ ಇದು.
ಕ್ರಿಂಟಾಲ್ ಕೆಜಿ ಕಲ್ಲು ನಾಗೇಶನಿಗ್ಯಾವ ಲೆಕ್ಕ?: ಜಿಲ್ಲಾಮಟ್ಟದಲ್ಲಿ ಸತತ ನಾಲ್ಕು ಬಾರಿ ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಜಯಶಾಲಿಯಾಗಿರುವ ಹಾಗೂ ತಾಲೂಕು ಮಟ್ಟದಲ್ಲಿ ಸತತ 5 ಬಾರಿ ಚಾಂಪಿಯನ್ ಆಗಿ ಈ ಬಾರಿ 6ನೇ ಸಲವೂ ಗೆದ್ದಿರುವ ಪಟ್ಟಣದ ಕಲ್ಕುಣಿಕೆಯ ನಾಗೇಶ್‌ಗೆ 120 ಕೆಜಿ ತೂಕದ ಗುಂಡು ಕಲ್ಲನ್ನು ಒಂದೂವರೆ ನಿಮಿಷದಲ್ಲಿ 11 ಬಾರಿ ಎತ್ತಿ ಹಾಕಿದ.

ಬಿದ್ದರು ಎದ್ದರು ಓಡಿದರು: ಮಹಿಳೆಯರ ವಿಭಾಗದಲ್ಲಿ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ನೋಡುಗರನ್ನು ನಗೆಗಡಲಲ್ಲಿ ತೇಲಿಸಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಓಡುವ ರಭಸದಲ್ಲಿ ದೊಪ್ಪನೆ ಬಿದ್ದವರೆಷ್ಟೋ.. ನೋವಾದರೂ ನಗುತ್ತಲೇ ಎದ್ದು ಮತ್ತೆ ಓಡಲು ಯತ್ನಿಸಿದ ಅವರ ಪ್ರಯತ್ನಕ್ಕೆ ನಿಜಕ್ಕೂ ಅನನ್ಯ.

ಮೂಟೆ ಎತ್ತಿಕೊಂಡು ಓಡಿದಾಗ: ಪುರುಷರ ವಿಭಾಗದಲ್ಲಿ ಗೊಬ್ಬರದ ಮೂಟೆ ಹೊತ್ತು ಓಡುವಾಗ ಹಾಗೂ ಗೋಣಿಚೀಲದ ಓಟದಲ್ಲಿ ಬೀಳುವ-ಏಳುವ ಪ್ರಕ್ರಿಯೆ ಎಲ್ಲರನ್ನೂ ರಂಜಿಸಿತು.

50 ಕೆಜಿ ತೂಕದ ಗೊಬ್ಬರ ತನ್ನದಾಗುತ್ತದೆ ಎಂಬ ಆಸೆಯಿಂದ ಯುವಕರು ಒಂದೇ ಉಸಿರಿನಲ್ಲಿ ಓಡುತ್ತ ಭಾರ ತಾಳಲಾರದೆ ದಡಕ್ಕನೆ ಬೀಳುತ್ತಿದ್ದರು. ಬಿದ್ದ ರಭಸಕ್ಕೆ ಮೂಟೆ ಒಡೆದು ಹೋಗುತ್ತಿತ್ತು. ಮತ್ತೆ ಓಡಲಾಗದೆ ಸಪ್ಪೆ ಮೋರೆ ಹಾಕಿಕೊಂಡು ವಾಪಸ್ ಬರುತ್ತಿದ್ದರು. ಗೋಣೀಚೀಲ ಹಾಕಿಕೊಂಡು ಓಡುವ ಸಮಯದಲ್ಲೂ ಬಿದ್ದರವೇನೂ ಕಮ್ಮಿಯಿರಲಿಲ್ಲ.

ಮಹಿಳೆಯರಿಗಾಗಿ ಲೆಮನ್ ಅಂಡ್ ಸ್ಪೂನ್ ಹಾಗೂ ರಂಗೋಲಿ ಸ್ಪರ್ಧೆ ನಡೆಯಿತು. ನಿಧಾನಗತಿಯಲ್ಲಿ ಸೈಕಲ್ ತುಳಿಸುವ ಸ್ಪರ್ಧೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಬಾರಿ ಕೆಸರುಗದ್ದೆ ಓಟದ ಸ್ಪರ್ಧೆಯನ್ನು ನಡೆಸದಿರುವುದು ಗ್ರಾಮೀಣ ಕ್ರೀಡಾಪಟುಗಳಿಗೆ ಬೇಸರ ಮೂಡಿಸಿತ್ತು.