ಹುಣಸೂರು : ಕುರಿಗಾಹಿಯನ್ನು ಬಲಿ ಪಡೆದ ಹುಲಿಯೂ 5 ವರ್ಷಗಳಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಾಲ್ಕು ವಲಯಗಳಲ್ಲಿ ಓಡಾಡುತ್ತಾ ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಂಡಿತ್ತು ಸರಹದ್ದಿನಲ್ಲಿ ಬದುಕುವ ಹುಲಿಯೂ ಹುಣಸೂರು, ಕಲ್ಲಳ್ಳ, ಆನೆಚೌಕೂರು, ವೀರನಹೊಸಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಅಳವಡಿಸಿರುವ ಕ್ಯಾಮರಾ ಟ್ರಾೃಪ್‌ನಲ್ಲಿ 71 ಬಾರಿ ಇದರ ಚಿತ್ರ ಸೆರೆ ಸಿಕ್ಕಿದೆ.
ಪಟ್ಟಣದ ಅರಣ್ಯ ಇಲಾಖೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ನಾಗರಹೊಳೆ ಉದ್ಯಾನವನದ ಉಪಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನೆ ನಿರ್ದೇಶಕ ಮಹೇಶ್‌ಕುಮಾರ್ ಮಾಹಿತಿ ನೀಡಿದರು.
ಎನ್‌ಟಿಸಿಎನ ನಡೆಸಿದ ಟೈಗರ್ ಸೆಲ್‌ನ ವರದಿಯಂತೆ ಹುಲಿಯ ಚಲನವಲಗಳು, ಕ್ಯಾಮರಾ ಟ್ರ್ಯಾ ಪಿಂಗ್‌ನಲ್ಲಿ ಕಂಡುಬಂದಿರುವ ಮಾಹಿತಿಗಳನ್ವಯ 2013 ರಿಂದ 2018ರವರೆಗೆ 5ವರ್ಷಗಳ ಕಾಲ ಈ ಹುಲಿ ಹುಣಸೂರು, ಕಲ್ಲಳ್ಳ, ಆನೆಚೌಕೂರು ಮತ್ತು ವೀರನಹೊಸಳ್ಳಿ ವಲಯ ವ್ಯಾಪ್ತಿಯಲ್ಲಿ ಒಟ್ಟು 71 ಬಾರಿ ಕಾಣಿಸಿಕೊಂಡಿದೆ. ಮತ್ತೊಂದು ವಿಶೇಷವೆಂದರೆ ಈ ಹುಲಿ ಜನರು ಓಡಾಡುವ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಇದು ಮಧ್ಯಾಹ್ನ 2ರಿಂದ 5 ಗಂಟೆಯೊಳಗೆ ಬೇಟೆಯಾಡುತ್ತಿತ್ತು. 5 ವರ್ಷಗಳಿಂದ ಸಂಗ್ರಹಿಸಿದ ಮಾಹಿತಿ ಮತ್ತು ಕುರಿಗಾಹಿ ಕೊಂದ ನಂತರ ಆ ಜಾಗದಲ್ಲಿ ಅಳವಡಿಸಿದ್ದ ಕ್ಯಾಮರಾ ನೀಡಿದ ಮಾಹಿತಿ ಅನ್ವಯ ಕುರಿಗಾಹಿಯನ್ನು ಕೊಂದ ಹುಲಿ ಇದೇ ಎಂಬುದು ದೃಢಪಟ್ಟಿದೆ.
ಹುಲಿಯ ಮತ್ತೊಂದು ವಿಶೇಷವೆಂದರೆ ತಾನು ಬಲಿಪಡೆದ ಜೀವಿಯನ್ನು ತಿಂದು ಹಾಕಿದ ನಂತರ ಸ್ವಲ್ಪ ಸಮಯದ ನಂತರ ಮತ್ತೆ ಅದೇ ಜಾಗಕ್ಕೆ ಬಂದು ಪರಿಸ್ಥಿತಿ ಅವಲೋಕನ ಮಾಡುತ್ತದೆ. ಇದನ್ನು ಅರಿತಿದ್ದ ಇಲಾಖೆ ಕುರಿಗಾಹಿಯನ್ನು ಕೊಂದ ಜಾಗದಲ್ಲೇ ಎರಡು ಬೋನುಗಳನ್ನ ಇಟ್ಟು ಮಾಂಸ ಇಟ್ಟಿತ್ತು. ಮೊದಲ ಬಾರಿಗೆ ಈ ಹುಲಿ ಮನುಷ್ಯನನ್ನು ಕೊಂದು ಹಾಕಿದ್ದು, ನಮ್ಮ ಊಹೆಯಂತೆ ಹುಲಿ ರಾತ್ರಿವೇಳೆ ಬಂದು ಬೋನಿಗೆ ಬಿದ್ದಿದೆ.
ಸೆರೆ ಹಿಡಿಯಲಾಗಿದೆ: ಕುರಿಗಾಹಿ ಜಗದೀಶ್ ಅವರನ್ನು ಬಲಿಪಡೆದ ಹುಲಿಯನ್ನು ಘಟನೆ ನಡೆದ ನಾಲ್ಕು ಗಂಟೆಯೊಳಗೆ ಇಲಾಖೆ ಸೆರೆ ಹಿಡಿದಿದೆ. 12 ವರ್ಷ ವಯಸ್ಸಿನ ಗಂಡುಹುಲಿಗೆ ಮುಂಭಾಗದ ಬಲಗಾಲಿನಲ್ಲಿ ಗಾಯವಾಗಿದ್ದು, ಕೀವುಗಟ್ಟಿದೆ. ಮೇಲ್ಭಾಗದ ಹಲ್ಲು ಮುರಿದುಬಿದ್ದಿದೆ. ವಯೋಸಹಜವಾಗಿ ಹುಲಿ ಶಕ್ತಿಹೀನವಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ ಹುಲಿ ಸುರಕ್ಷತೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಬನ್ನೇರುಘಟ್ಟದ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ ಎಂದರು.
2020ರ ಮಾರ್ಚ್ ತಿಂಗಳಿನಿಂದ ಇಂದಿನವರೆಗೆ ನಾಲ್ಕು ಜಾನುವಾರುಗಳನ್ನು ಹುಲಿ ತಿಂದು ಹಾಕಿ, ಒಂದನ್ನು ಗಾಯಗೊಳಿಸಿದೆ. ಇತ್ತೀಚೆಗೆ ಕುರಿಗಾಹಿಯನ್ನು ಕೊಂದು ತಿಂದುಹಾಕಿದೆ. ಕಾಡಂಚಿನ ಜನರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಮಹೇಶ್‌ಕುಮಾರ್ ತಿಳಿಸಿದ್ದಾರೆ. ಎಸಿಎಫ್ ಎಸ್.ಆರ್.ಪ್ರಸನ್ನಕುಮಾರ್ ಇದ್ದರು.