ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿ

ಹುಣಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ ಕಿಸಾನ್) ಯೋಜನೆಗೆ ಅರ್ಜಿ ಸಲ್ಲಿಸಲು ಜೂ.28 ಅಂತಿಮ ದಿನವಾಗಿದ್ದು, ರೈತರು ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಐ.ಇ.ಬಸವರಾಜು ಕೋರಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ ಇನ್ನಿತರ ಇಲಾಖೆಗಳ ಸಿಬ್ಬಂದಿಗೆ ಪಿಎಂ ಕಿಸಾನ್ ಯೋಜನೆ ಜಾರಿ ಕುರಿತು ಆಯೋಜಿಸಿದ್ದ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಪಿಎಂ ಕಿಸಾನ್ ಯೋಜನೆ ಸವಲತ್ತು ಪಡೆಯಲು ತಾಲೂಕಿನಲ್ಲಿ ಇಲ್ಲಿವರೆಗೆ 21,035 ಅರ್ಜಿಗಳು ಬಂದಿವೆ. ತಾಲೂಕಿನಲ್ಲಿ ಒಟ್ಟು 58,286 ರೈತರಿದ್ದು, ಶೇ.50ರಷ್ಟು ಪ್ರಮಾಣದ ಅರ್ಜಿಗಳು ಕೂಡ ಬಂದಿಲ್ಲ. ಹಾಗಾಗಿ ರೈತರಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅರ್ಜಿ ಸ್ವೀಕಾರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರದ ಸೂಚನೆಯಂತೆ ಅರ್ಜಿಯೊಂದಿಗೆ ಪಹಣಿ ಸೇರಿದಂತೆ ಯಾವುದೇ ದಾಖಲೆಗಳನ್ನು ಲಗತ್ತಿಸಬೇಕಿಲ್ಲ. ಆದರೂ ರೈತರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ನೀಡಿದ್ದಲ್ಲಿ ಹೆಸರು, ಸಂಖ್ಯೆಗಳಲ್ಲಿ ಆಗಬಹುದಾದ ತಪ್ಪುಗಳನ್ನು ನಿಯಂತ್ರಿಸಬಹುದು ಎಂದು ತಹಸೀಲ್ದಾರ್ ಕೋರಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಕೃಷಿ ಪರಿಕರಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಈ ಯೋಜನೆಯಡಿ 6 ಸಾವಿರ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಿದೆ ಎಂದರು.

ತಾಪಂ ಇಒ ಸಿ.ಆರ್. ಕೃಷ್ಣಕುಮಾರ್ ಮಾತನಾಡಿ, ಆರ್‌ಟಿಸಿ ಇನ್ನಿತರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಪದ್ಧತಿಯನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಸರ್ಕಾರ ರೂಪಿಸಿರುವ ಸ್ವಯಂಘೋಷಣಾ ಪತ್ರವನ್ನು ಭರ್ತಿ ಮಾಡಿ ನೀಡಿದರೆ ಸಾಕು. ಸ್ವಯಂ ಘೋಷಣಾ ಪತ್ರವನ್ನು ರೈತಸೇವಾ ಕೇಂದ್ರ, ಗ್ರಾ.ಪಂ., ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಕಚೇರಿಗಳಲ್ಲಿ ಪಡೆದು ಅರ್ಜಿ ಭರ್ತಿ ಮಾಡಿ ನೀಡಬೇಕು. ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳ ಬಳಿಯೂ ನೀಡಬಹುದು ಎಂದರು.

ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಸಂಖ್ಯೆ, ಹೆಸರುಗಳನ್ನು ಸ್ಪಷ್ಟವಾಗಿ ಬರೆಯುವುದು ಉತ್ತಮ. ತಾಲೂಕಿನಲ್ಲಿ ಈಗಾಗಲೇ ಸ್ವೀಕೃತವಾದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವ ಕಾರ್ಯ ಶನಿವಾರ, ಭಾನುವಾರಗಳಲ್ಲೂ ನಡೆದಿದ್ದು, ರೈತರು ಶೀಘ್ರ ಅರ್ಜಿಗಳನ್ನು ಸಲ್ಲಿಸಬೇಕೆಂದು ಕೋರಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಅರ್ಹರ‌್ಯಾರು?: ಪಿಎಂ ಕಿಸಾನ್ ಯೋಜನೆ ಸವಲತ್ತು ಪಡೆಯುವವರು (ಗ್ರೂಪ್ ಡಿ ಹೊರತುಪಡಿಸಿ) ಸರ್ಕಾರಿ ಅಧಿಕಾರಿಗಳಾಗಿರಬಾರದು(ನಿವೃತ್ತ ಅಥವಾ ಹಾಲಿ). 10 ಸಾವಿರ ರೂ.ಗಳಿಗಿಂತ ಹೆಚ್ಚಿನ ಪಿಂಚಣಿ ಪಡೆಯುವವರಿಗೆ ಸೌಲಭ್ಯವಿಲ್ಲ. ಆದಾಯ ತೆರಿಗೆ ಪಾವತಿಸುವವರಿಗೆ ಯೋಜನೆ ಒಳಪಡುವುದಿಲ್ಲ. ವೃತ್ತಿಪರ ಕ್ಷೇತ್ರದ ವೈದ್ಯರು, ಇಂಜಿನಿಯರ್, ವಕೀಲರಿಗೆ ಯೋಜನೆಯ ಸೌಲಭ್ಯವಿಲ್ಲ. ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದವರಿಗೆ ಯೋಜನೆ ಅಲಭ್ಯ.

Leave a Reply

Your email address will not be published. Required fields are marked *