ಹುನ್ನೂರ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ

ಜಮಖಂಡಿ: ತಾಲೂಕಿನ ಹುನ್ನೂರಿನಲ್ಲಿ ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದೆ.

ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದ ದಲಿತ ಯುವಕರಿಗೆ ಮಂಗಳವಾರ ಗ್ರಾಮಸ್ಥರು ಥಳಿಸಿದ್ದರು. ಈ ಘಟನೆ ಬಳಿಕ ಸಂಜೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಎರಡು ಗುಂಪುಗಳ ಮುಖಂಡರಿಗೆ ತಿಳಿವಳಿಕೆ ನೀಡಿದ್ದರು. ಇನ್ನು ಮುಂದೆ ಹೀಗಾದಂತೆ ನೋಡಿಕೊಳ್ಳುವುದಾಗಿ ಎರಡು ಗುಂಪುಗಳ ಜನರು ಪೊಲೀಸರಿಗೆ ಭರವಸೆ ನೀಡಿದ್ದರು.

ಸಂಧಾನ ಸಭೆ ಬಳಿಕ ಹುನ್ನೂರ ಗ್ರಾಮಕ್ಕೆ ಸೇರದ ಜಮಖಂಡಿ ನಗರದ ಸಂಘಟನೆಗಳ ಪದಾಧಿಕಾರಿಗಳು ಗ್ರಾಮದಲ್ಲಿ ಅದೇ ದಿನ ರಾತ್ರಿ ಬೈಕ್ ರ‍್ಯಾಲಿ ನಡೆಸಿ ಗ್ರಾಮಸ್ಥರ ಜಾತಿ ಕುರಿತು ಬಹಿರಂಗವಾಗಿ ಹೀಯಾಳಿಸಿದರು ಎನ್ನಲಾಗಿದೆ. ಇದರಿಂದ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ 5 ಯುವಕರು ಗಾಯಗೊಂಡು, ನಾಲ್ಕೈದು ಬೈಕ್​ಗಳು ಜಖಂಗೊಂಡಿವೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ ಪರಸ್ಪರ ದೂರು ದಾಖಲಾಗಿವೆ.

ಮಾಜಿ ಶಾಸಕರ ಭೇಟಿ: ಹುನ್ನೂರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆ ಹಿನ್ನೆಲೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಗ್ರಾಮಕ್ಕೆ ಭೇಟಿ ನೀಡಿ ಸಣ್ಣ ಸಣ್ಣ ವಿಷಯಗಳಿಗೆ ಜಗಳವಾಡದೆ ಗ್ರಾಮದಲ್ಲಿ ಶಾಂತಿ ಕಾಪಾಡಬೇಕು. ಜಾತಿ ವೈಮನಸ್ಸು ಮಾಡಿಕೊಳ್ಳಬೇಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿ ಕೊಂಡರು. ಆಸ್ಪತ್ರೆಯಲ್ಲಿ ದಾಖಲಾದ ದಲಿತ ಯುವಕರ ಆರೋಗ್ಯ ವಿಚಾರಿಸಿ ಸಣ್ಣ ಪುಟ್ಟ ಘಟನೆಗಳಲ್ಲಿ ಬಾಹ್ಯ ಶಕ್ತಿಗಳ ಪ್ರಚೋದನೆಗೆ ಬಲಿಯಾಗಬಾರದೆಂದು ವಿನಂತಿಸಿದರು.

ಸೂಕ್ತ ಬಂದೋಬಸ್ತ್: ಇಬ್ಬರು ಡಿವೈಎಸ್​ಪಿ, ಐದು ಜನ ಸಿಪಿಐ, 10 ಪಿಎಸ್​ಐ, 15 ಎಎಸ್​ಐ, ಐದು ಡಿಆರ್, 120ರಿಂದ 130 ಪೊಲೀಸ್ ಸಿಬ್ಬಂದಿ, 1 ಕೆಎಸ್​ಆರ್​ಪಿ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಬಾಹ್ಯ ವ್ಯಕ್ತಿಗಳ ಪ್ರಚೋದನೆ: ಗ್ರಾಮದ ಪ್ರೌಢಶಾಲೆಗೆ ವಿದ್ಯಾ ರ್ಥಿನಿ ತೆರಳುತ್ತಿದ್ದ ವೇಳೆ ದಲಿತ ಯುವಕರು ಚುಡಾಯಿಸಿದ್ದರು. ಇದನ್ನು ಗಮನಿಸಿದ್ದ ಬಾಲಕಿ ಚಿಕ್ಕಪ್ಪ ಪ್ರಶ್ನಿಸಿ ಕಿಡಿಗೇಡಿ ಯುವಕರನ್ನು ಥಳಿಸಿದ್ದರು. ಈ ಘಟನೆಯನ್ನು ಪೊಲೀಸರು ಗ್ರಾಮಸ್ಥರ ಮಟ್ಟದಲ್ಲೇ ತಿಳಿ ಗೊಳಿಸಿದ್ದರು. ಮಂಗಳವಾರ ರಾತ್ರಿ ಗ್ರಾಮಕ್ಕೆ ಸಂಬಂಧವಿಲ್ಲದ ಕೆಲ ಸಂಘಟನೆ ಪದಾಧಿಕಾರಿಗಳು ಬೈಕ್ ರ‍್ಯಾಲಿ ಮೂಲಕ ಗ್ರಾಮದಲ್ಲಿ ತೆರಳಿ ಗ್ರಾಮಸ್ಥರು ಕೋಪಗೊಳ್ಳುವಂತೆ ನಿಂದಿಸಿದ್ದರಿಂದ ಈ ಘರ್ಷಣೆ ಉಂಟಾಗಿದೆ ಎನ್ನಲಾಗಿದೆ.