ವಿಜಯಪುರ: ಕುಲಶಾಸ್ತ್ರೀಯ ಅಧ್ಯಯನ ಆಧರಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ವಯ ರಾಜ್ಯ ಸರ್ಕಾರದಿಂದ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಅಧಿಕೃತವಾಗಿ ನೀಡಲಾಗುತ್ತಿರುವ ಎಸ್‌ಟಿ ಪ್ರಮಾಣ ಪತ್ರ ತಡೆಗೆ ಹುನ್ನಾರ ನಡೆದಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅ. 14 ರಂದು ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ತಳವಾರ ಮಹಾಸಭಾ ತಿಳಿಸಿದೆ.
ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಅನುಮೋದನೆಯಾಗಿ ರಾಷ್ಟ್ರಪತಿಗಳಿಂದ ಅಂಕಿತವಾದ ಬಳಿಕವೇ ತಳವಾರ ಮತ್ತು ಪರಿವಾರ ಸಮುದಾಯವನ್ನು ನಾಯಕ ಮತ್ತು ನಾಯಕಡ ಸಮುದಾಯಗಳ ಪರ್ಯಾಯ ಪದ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಲವು ಬಾರಿ ಕೇಂದ್ರಕ್ಕೆ ಪತ್ರ ಬರೆದು ಸ್ಪಷ್ಟನೆ ಕೋರಿಯೇ ಆ ಬಳಿಕ ಪ್ರವರ್ಗ -1ರ ಅನುಕ್ರಮ ಸಂಖ್ಯೆ 88 ಎಚ್‌ನಲ್ಲಿರುವ ತಳವಾರ ಜಾತಿಯನ್ನು ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದೆ. ಆದರೂ, ಕೆಲವು ಪಟ್ಟಭದ್ರ ಹಿತಾಸಕ್ಷಿಗಳ ಮಾತಿಗೆ ಕಿವಿಗೊಟ್ಟು ಸಿಎಂ ಸಿದ್ದರಾಮಯ್ಯ ತಳವಾರ ಸಮುದಾಯಕ್ಕೆ ವ್ಯತಿರಿಕ್ತವಾಗುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುತ್ತಿರುವರೆಂಬ ಗುಮಾನಿ ಕಾಡುತ್ತಿದ್ದು, ಸಿಎಂಗೆ ಅಸಲಿಯತ್ತು ತಿಳಿಸಿಕೊಡಲೆಂದೇ ಜಾಥಾ ಹಮ್ಮಿಕೊಂಡಿದ್ದಾಗ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಕಾಶ ಸೊನ್ನದ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ 52 ಜಾತಿಗಳಲ್ಲಿ ಪ್ರಬಲವಾದ ಒಂದು ವರ್ಗ ಇನ್ನಿತರೆ ಸಮುದಾಯಗಳಿಗೆ ಎಸ್‌ಟಿ ಪ್ರಮಾಣ ಪತ್ರ ಕೊಡುವುದನ್ನು ವಿರೋಧಿಸುತ್ತಲೇ ಬಂದಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಬಲವಾಗಿರುವ ಕೆಲವು ಸಮುದಾಯಗಳು ಶೋಷಿತ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ಕೊಡುವುದನ್ನು ಸಹಿಸುತ್ತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ವಾಲ್ಮೀಕಿ, ಬೇಡ, ಬೇಡರ ಸಮುದಾಯಕ್ಕೆ ಸೇರಿದ ತಳವಾರ ಮತ್ತು ಕೋಲಿ, ಕಬ್ಬಲಿಗ, ಅಂಬಿಗ, ಗಂಗಾಮತ ಸಮುದಾಯಕ್ಕೆ ಸೇರಿದ ತಳವಾರ ಎಂಬ ಗೊಂದಲ ಸೃಷ್ಠಿಸಲಾಗುತ್ತಿದೆ. ವಾಸ್ತವದಲ್ಲಿ ತಳವಾರ ಎಂಬುದು ಸ್ವತಂತ್ರವಾದ ಪದ. ಅಂತೆಯೇ ರಾಜ್ಯಪತ್ರದಲ್ಲಿ ತಳವಾರ ಮತ್ತು ಪರಿವಾರ ಪದಗಳನ್ನು ನಾಯಕ ಮತ್ತು ನಾಯಕಡ ಪದಗಳ ಪರ್ಯಾಯ ಎಂದು ಪರಿಗಣಿಸುವಂತೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಆದ ಬಳಿಕವೇ ಪ್ರವರ್ಗ-1ರಿಂದ ತೆಗೆದು ಹಾಕಲಾಗಿದೆ ಎಂದರು.
ಮುಖಂಡ ಶಿವಾಜಿ ಮೆಟಗಾರ ಮಾತನಾಡಿ, ತಳವಾರ ಸಮುದಾಯದ ಹೆಸರಿನಲ್ಲಿ ಕೆಲವು ನಕಲಿ ಜಾತಿ ಪ್ರಮಾಣ ಪತ್ರಗಳು ವಿತರಣೆಯಾಗಿರುವುದಕ್ಕೆ ನಮ್ಮ ವಿರೋಧವಿದೆ. ಆ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ಅದಕ್ಕಾಗಿಯೇ ಪ್ರತ್ಯೇಕ ಇಲಾಖೆಯೂ ಇದೆ. ಆದರೆ, ಕೆಲವೇ ಕೆಲವು ನಕಲಿ ಪ್ರಮಾಣ ಪತ್ರಗಳನ್ನಿಟ್ಟುಕೊಂಡು ಅರ್ಹರಿಗೂ ಅವಕಾಶ ತಪ್ಪಿಸುವ ಹುನ್ನಾರ ಕಂಡು ಬರುತ್ತಿದೆ. ಹಾಗೊಂದು ವೇಳೆ ಸಮುದಾಯದೊಂದಿಗೆ ಚರ್ಚಿಸದೇ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದೇ ಆದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಶ್ಚಾತಾಪ ಪಡಬೇಕಾಗುತ್ತದೆ ಎಂದರು.
ಮುಖಂಡ ಸಾಹೇಬಗೌಡ ಬಿರಾದಾರ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಹಂಚಿಕೆಯಾಗಿರುವ ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತನಿಖೆ ನಡೆದಿದೆ. ನ್ಯಾಯಾಲಯ ಆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಅದರೊಳಗಾಗಿ ರಾಜ್ಯ ಸರ್ಕಾರ ಸಮುದಾಯದ ಅಭಿಪ್ರಾಯ ಪಡೆಯದೇ ವ್ಯತಿರಿಕ್ತ ನಿರ್ಣಯ ಕೈಗೊಳ್ಳಬಾರದೆಂಬ ಕಾರಣಕ್ಕೆ ಜಾಥಾ ಹಮ್ಮಿಕೊಂಡಿದ್ದು, ಅ. 14 ರಂದು ಬೆಳಗ್ಗೆ 10ಕ್ಕೆ ನಡೆಯುವ ಜಾಥಾದಲ್ಲಿ ಸುಮಾರು 10 ಸಾವಿರ ಜನ ಭಾಗವಹಿಸಲಿದ್ದಾರೆ ಎಂದರು.
ಮುಖಂಡರಾದ ಸುರೇಶಗೌಡ ಪಾಟೀಲ, ರಾಜು ಮೆಟಗಾರ, ಶ್ರೀಮಂತ ತಳವಾರ, ಪ್ರವೀಣ ನಾಟಿಕಾರ, ಬಸವರಾಜ ನಾಗನೂರ, ಗಂಗುಬಾಯಿ ಧುಮಾಳೆ, ಸದಾಶಿವ ಕೋಲಕಾರ ಮತ್ತಿತರರಿದ್ದರು.
ಶೀಘ್ರದಲ್ಲೇ ಸಿಎಂ ಬಳಿ ನಿಯೋಗ
ತಳವಾರ ಮತ್ತು ಪರಿವಾರ ಸಮುದಾಯನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿರುವುದನ್ನು ಸಹಿಸಲಾಗದ ಕೆಲವು ದುಷ್ಟ ಶಕ್ತಿಗಳು ನಡೆಸುತ್ತಿರುವ ಕುತಂತ್ರಕ್ಕೆ ಕಿವಿಗೊಡಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗುದು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ತಿಳಿಸಿದ್ದಾರೆ.
ಎಸ್‌ಟಿ ಪ್ರಮಾಣ ಪತ್ರ ತಡೆಹಿಡಿಯಲು ನಡೆಸುತ್ತಿರುವ ನಿರಂತರ ಹುನ್ನಾರಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಗೊಡುತ್ತಿರುವುದನ್ನು ಕಂಡು ಬರುತ್ತಿದೆ. ಈ ಬಗ್ಗೆ ಸಾಕಷ್ಟು ಗುಸುಗುಸು ಕೇಳಿ ಬರುತ್ತಿದ್ದು ಕಾಂಗ್ರೆಸ್ ವಿರುದ್ಧ ತಳವಾರರ ಆಕ್ರೋಶ ಮತ್ತೆ ಭುಗಿಲೇಳತೊಡಗಿದೆ. ಹೀಗಾಗಿ ಸಮುದಾಯದ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಕೂಲಂಕುಷವಾಗಿ ಪರಿಶೀಲಿಸುವಂತೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಶೀಘ್ರದಲ್ಲಿಯೇ ಸಿಎಂ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.