ಬರ ನಿರ್ಲಕ್ಷಿಸಿದರೆ ತಕ್ಕ ಶಾಸ್ತಿ

ಹುನಗುಂದ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್​ಆರ್​ಇಜಿ) ಯಡಿ ತಾಲೂಕಿನಲ್ಲಾದ ಪ್ರಗತಿ ಕುರಿತು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಸಮಾಧಾನ ವ್ಯಕ್ತಪಡಿಸಿದರು.

ತಾಪಂ ಸಭಾಭವನದಲ್ಲಿ ಬರ ಕಾಮಗಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ರ್ಚಚಿಸಲು ಬುಧವಾರ ನಡೆಸಿದ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಎನ್​ಆರ್​ಇಜಿ ಯೋಜನೆ ಕಾಮಗಾರಿಗೆ ಹಣಕಾಸಿನ ಕೊರತೆಯಿಲ್ಲ. ಪ್ರಸಕ್ತ ಹಣಕಾಸು ವರ್ಷ ಮುಗಿಯಲು ಎರಡೂವರೆ ತಿಂಗಳು ಮಾತ್ರ ಬಾಕಿ ಇದೆ. ಆದರೆ ತಾಲೂಕಿನ ಒಂದೆರಡು ಗ್ರಾಮ ಪಂಚಾಯಿತಿ ಹೊರತುಪಡಿಸಿ ಬಹುತೇಕ ಪಂಚಾಯಿತಿಗಳಲ್ಲಿ ಶೇ.30ರಷ್ಟು ಕೆಲಸ ಕೂಡ ಆಗಿಲ್ಲ. ಹೀಗಾದರೆ ಸರ್ಕಾರಿ ಯೋಜನೆಗಳು ಸಫಲವಾಗುವುದು ಹೇಗೆ ಎಂದು ಪ್ರಶ್ನಿಸಿದರು.

ಪ್ರಸಕ್ತ ವರ್ಷ ತೀವ್ರ ಬರದಿಂದಾಗಿ ಕೃಷಿ ಕಾರ್ವಿುಕರು ಉದ್ಯೋಗಕ್ಕಾಗಿ ಗುಳೆ ಹೊರಟಿದ್ದಾರೆ. ಎಲ್ಲ ಪಿಡಿಒಗಳು ನಿರ್ಲಕ್ಷ್ಯ ವಹಿಸದೆ ದುಡಿಯು ವವರಿಗೆ ಕಡ್ಡಾಯವಾಗಿ ಕೆಲಸ ನೀಡಬೇಕು. ಆಯಾ ಗ್ರಾಮದ ಜನಸಂಖ್ಯೆಗನುಗುಣವಾಗಿ ಜಾಬ್ ಕಾರ್ಡ್ ನೀಡಬೇಕು. ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಯೋಜನೆಯಡಿ 21 ಮಾದರಿ ಕಾಮಗಾರಿಗೆ ಅವಕಾಶವಿದ್ದರೂ ಬಹುತೇಕ ಗ್ರಾಪಂಗಳಲ್ಲಿ ಕೆರೆ ಹೂಳೆತ್ತುವುದಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ತೆಗೆದ ಹೂಳು ಮತ್ತೆ ಕೆರೆಯಲ್ಲಿಯೇ ಬಿದ್ದು ಸರ್ಕಾರದ ಹಣ ವ್ಯರ್ಥವಾಗುತ್ತಿದೆ. ಅದರ ಬದಲು ರಸ್ತೆ, ಚರಂಡಿ, ಶಾಲೆ ಕಾಂಪೌಂಡ್, ನಮ್ಮ ಹೊಲ ನಮ್ಮ ದಾರಿ, ಕೃಷಿ ಹೊಂಡ ಮತ್ತು ಬದು ನಿರ್ವಣ, ದನದ ಕೊಟ್ಟಿಗೆಯಂಥ ಇನ್ನಿತರ ಕಾಮಗಾ ರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಬೇಸಿಗೆಯಲ್ಲಿ ಅಗತ್ಯವಿರುವೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ತಾಲೂಕು ಆಡಳಿತದ ಬಳಿ 42 ಲಕ್ಷ ರೂ. ಅನುದಾನವಿದೆ. ಪಿಡಿಒಗಳು ತಮ್ಮ ವ್ಯಾಪ್ತಿಯ ಎಲ್ಲ ಶಾಲೆ ಮತ್ತು ಅಂಗನವಾಡಿ ಕಟ್ಟಡ ಗಳಲ್ಲಿ ಕಡ್ಡಾಯವಾಗಿ ಶೌಚಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿ ದರು. ತಾಪಂ ಇಒ ಪುಷ್ಪಾ ಕಮ್ಮಾರ, ಕಚೇರಿ ಎಡಿ ಮುರಳಿಧರ ದೇಶಪಾಂಡೆ ಸೇರಿ ಪಿಡಿಒಗಳು ಇದ್ದರು.

ಗ್ರಾನೈಟ್ ಕ್ವಾರಿಗಳಿಗೆ ನೋಟಿಸ್ ಜಾರಿ ಮಾಡಿ:ಬಲಕುಂದಿ, ಕೊಡಗಲಿ ಸೇರಿ ಸುತ್ತಲಿನ ಪ್ರದೇಶದಲ್ಲಿನ ಗ್ರಾನೈಟ್ ಕ್ವಾರಿಗಳ ದೊಡ್ಡ ತಗ್ಗುಗಳಲ್ಲಿ ನಿಂತ ನೀರಿನಿಂದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪಿಡಿಒಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಎಲ್ಲ ಕ್ವಾರಿ ಮಾಲೀಕರಿಗೆ ತಕ್ಷಣವೇ ನೋಟಿಸ್ ಜಾರಿಯಾಗುವಂತೆ ಮಾಡಬೇಕು ಎಂದು ತಾಪಂ ಇಒ ಪುಷ್ಪಾ ಕಮ್ಮಾರ ಅವರಿಗೆ ಸೂಚಿಸಿದರು. ಸೊಳ್ಳೆ ನಿಯಂತ್ರಣಕ್ಕೆ ಈ ಪ್ರದೇಶದಲ್ಲಿ ಫಾಗಿಂಗ್ ಮಾಡಿಸಬೇಕು ಎಂದು ಪಿಡಿಒಗಳಿಗೆ ಹೇಳಿದರು.