ಹಸಿವು ತಾಳಲಾರದೇ ಕೀಟನಾಶಕ ಸೇವಿಸಿದ 10 ವರ್ಷದ ಬಾಲಕನ ಸ್ಥಿತಿ ಗಂಭೀರ

ಭೋಪಾಲ್​: ಹಸಿವಿನಿಂದ ಬಳಲುತ್ತಿದ್ದ ಬುಡಕಟ್ಟು ಜನಾಂಗದ ಹತ್ತು ವರ್ಷದ ಬಾಲಕನೊಬ್ಬ ತನ್ನ ಹಸಿವನ್ನು ನೀಗಿಸಿಕೊಳ್ಳಲು ಕೀಟನಾಶಕ ಸೇವಿಸಿರುವ ಹೃದಯ ವಿದ್ರಾವಕ ಘಟನೆ ಮಧ್ಯ ಪ್ರದೇಶದ ರತ್ಲಾಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಈ ಘಟನೆಯನ್ನು ತನಿಖೆ ನಡೆಸಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೇ(NCPCR) ಮಾಹಿತಿಯನ್ನು ಬಹಿರಂಗ ಪಡಿಸಿದೆ. ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ ತಿಂಗಳು ಡಿಸೆಂಬರ್​ 29 ರಂದು ಪೊಂಬಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ಈ ಸಂಬಂಧ ವಿಡಿಯೋ ವೈರಲ್​ ಆಗುತ್ತಿದ್ದಂತೆ ಘಟನೆ ಮುಖ್ಯವಾಹಿನಿಗೆ ಬಂದಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಆಯೋಗದ ಮುಖ್ಯಸ್ಥ ರಾಘವೇಂದ್ರ ಶರ್ಮಾ ಮಾತನಾಡಿ, ”ತುಂಬಾ ಹಸಿವಾಗಿತ್ತು. ಮನೆಯಲ್ಲಿ ಊಟ ಇಲ್ಲದಿದ್ದರಿಂದ ಕೈಗೆ ಸಿಕ್ಕಿದ್ದನ್ನು ಕುಡಿದುಬಿಟ್ಟೆ” ಎಂದು ಬಾಲಕ ತಿಳಿಸಿರುವುದಾಗಿ ಮಾಹಿತಿ ನೀಡಿದರು.

ಬಾಲಕನ ಕುಟುಂಬಸ್ಥರು ಜಂಟಿಯಾಗಿ ಸ್ವಲ್ಪ ಕೃಷಿ ಭೂಮಿಯನ್ನು ಹೊಂದಿದ್ದು, ಕಳೆದ ನವೆಂಬರ್​ನಲ್ಲಿ ಕೊನೆಯ ಪಡಿತರವನ್ನು ಪಡೆದುಕೊಂಡಿದ್ದಾರೆ. ಬಾಲಕನ ಕುಟುಂಬಸ್ಥರು ರಾಜಸ್ಥಾನದ ಕೋಟಾ ಪ್ರದೇಶಕ್ಕೆ ಕೂಲಿಗಾಗಿ ತೆರಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೋಟಾದಿಂದ ಮರಳಿ ಬಂದ ಬಾಲಕನ ತಂದೆ ನಮ್ಮ ಮನೆಯಲ್ಲಿ ಯಾವುದೇ ಪಡಿತರ ಇಲ್ಲ. ಈ ವಿಚಾರವನ್ನು ಹತ್ತಿಕ್ಕಲು ಅಧಿಕಾರಿಗಳು ಮನೆಯಲ್ಲಿ ಪಡಿತರ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)