ನಿಷೇಧಿತ ಮಾರ್ಗ ತೆರವುಗೊಳಿಸಿ

ಹುಣಸೂರು: ಪಟ್ಟಣದ ಎರಡು ಪ್ರಮುಖ ರಸ್ತೆಗಳಲ್ಲಿ ವಿಧಿಸಿರುವ ಹನುಮ ಜಯಂತಿ, ರಾಷ್ಟ್ರೀಯ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವಗಳ ಮೆರವಣಿಗೆ ನಿಷೇಧ ತೆರವುಗೊಳಿಸುವ ಬಗ್ಗೆ ಜಿಲ್ಲಾಡಳಿತ ಚಿಂತಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಮತ್ತು ನಾಗರಿಕರು ಆ ಎರಡು ಮಾರ್ಗದಲ್ಲಿ ಮೆರವಣಿಗೆ ನಿಷೇಧ ತೆರವುಗೊಳಿಸಲು ಸರ್ವಾನುಮತದಿಂದ ಒತ್ತಾಯಿಸಿದ್ದಾರೆ. ಯಾವುದೇ ಧರ್ಮೀಯರು ನಿಷೇಧವನ್ನು ಬೆಂಬಲಿಸುತ್ತಿಲ್ಲ. ರಸ್ತೆ ಕಿರಿದಾಗಿದೆ ಎಂದು ಅಧಿಕಾರಿಗಳು ತಿಳಿಸಿದಲ್ಲಿ ವಿಶೇಷ ಅನುದಾನದಡಿ ರಸ್ತೆ ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸೋಣ ಎಂದರು.

ಹನುಮ ಜಯಂತಿ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯು ಹಿಂಬಾಲಕರ ಅತಿರೇಕದ ವರ್ತನೆಗೆ ಕಾರಣವಾಗುತ್ತಿದೆ. ಹೀಗಾಗಿ ನಾವ್ಯಾರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದು ಬೇಡ. ಮೆರವಣಿಗೆಗೆ ಚಾಲನೆ ನೀಡಿ ಹಿಂದಿರುಗೋಣ. ಜನರ ಒಳಿತಿಗಾಗಿ ತ್ಯಾಗ ಮಾಡಿ ಜಿಲ್ಲಾಡಳಿತಕ್ಕೆ ಸಹಕಾರ ನೀಡೋಣ ಎಂದರು.

ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ನ.30ರೊಳಗೆ ರಸ್ತೆ ನಿಷೇಧ ತೆರವುಗೊಳಿಸಬೇಕು. ಇಲ್ಲದಿದ್ದರೆ ಅಂದು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದಂತೂ ಖಂಡಿತ. ಇದನ್ನು ಜಿಲ್ಲಾಡಳಿತ ಮನಗಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲು ಯಾವ ತೀರ್ಮಾನ ಕೈಗೊಂಡರೂ ನಾನು ಬದ್ಧ ಎಂದರು.

ಜಿಲ್ಲಾಧಿಕಾರಿ ಅಭಿರಾಂ ಶಂಕರ್ ಮಾತನಾಡಿ, ಇಂದಿನ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಸಲಹೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ನಗರಸಭಾಧ್ಯಕ್ಷ ಎಚ್.ವೈ.ಮಹದೇವ್, ಅಡಿಷನಲ್ ಎಸ್‌ಪಿ ಸ್ನೇಹಾ, ಉಪವಿಭಾಗಾಧಿಕಾರಿ ಕೆ.ನಿತೀಶ್, ತಹಸೀಲ್ದಾರ್ ಎಸ್.ಪಿ.ಮೋಹನ್, ಇಒ ಸಿ.ಆರ್.ಕೃಷ್ಣಕುಮಾರ್ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

ನಾಗರಿಕರ ಅಭಿಪ್ರಾಯ
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್.ಯೋಗಾನಂದ್ ಮಾತನಾಡಿ, ರಸ್ತೆ ನಿಷೇಧ ತೆರವು ಆಗಲೇಬೇಕು. ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಸಮಸ್ಯೆ ಬಿಗಡಾಯಿಸಿದೆ. ಅಮಾಯಕ ಯುವಕರ ಮೇಲೆ ರೌಡಿಶೀಟರ್ ಹಾಕಲಾಗಿದೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬೆಲೆ ನೀಡಬೇಕು ಎಂದರು.
ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಹನುಮ ಜಯಂತಿ ಮೆರವಣಿಗೆಗೆ ಹೊರಗಿನಿಂದ ಜನರು ಬರದಂತೆ ಕ್ರಮ ಕೈಗೊಳ್ಳಬೇಕು. ಮೆರವಣಿಗೆಯಲ್ಲಿ ಜನಪ್ರತಿನಿಧಿಯ ವ್ಯಕ್ತಿ ಪೂಜೆ ನಿಲ್ಲಿಸಬೇಕು. ಸಂಸದರೂ ಈ ಸಭೆಗೆ ಬರಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ದಲಿತ ಜನಾಂಗದ ಯುವಕರು ಹನುಮ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅವರ ಮೇಲೆ ವಿವಿಧ ಕಾರಣ ತಿಳಿಸಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಡಳಿತ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.