More

    ವ್ಯವಹಾರ ಜ್ಞಾನದ ಅರಿವು ಪಡೆದ ಮಕ್ಕಳು

    ಹುಣಸೂರು: ಪಟ್ಟಣದ ಬ್ರಿಲಿಯಂಟ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ಮಕ್ಕಳು ವಿವಿಧ ತಿಂಡಿ-ತಿನಿಸು, ಹಣ್ಣು, ತರಕಾರಿ ಇನ್ನಿತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನದ ಅರಿವನ್ನು ಪಡೆದರು.

    ಸಂತೆಯ ಸಾಲಿನಲ್ಲಿ ಮಕ್ಕಳು ತಾತ್ಕಾಲಿಕ ಅಂಗಡಿ ತೆರೆದು, ನೈಜ ವ್ಯಾಪಾರಸ್ಥರಂತೆಯೇ ಪಾನಿಪುರಿ, ಚುರುಮುರಿ, ಸೌತೆಕಾಯಿ, ಟೊಮ್ಯಾಟೊ ಸಲಾಡ್, ಮೊಳಕೆ ಕಾಳುಗಳ ಸಲಾಡ್, ಫ್ರೂಟ್ ಸಲಾಡ್, ವಿವಿಧ ಚಾಟ್ಸ್, ಜ್ಯೂಸ್, ಮಸಾಲೆ ಮಜ್ಜಿಗೆ, ಕರ್ಜಿಕಾಯಿಯನ್ನು ಪೈಪೋಟಿಗೆ ಬಿದ್ದವರಂತೆ ಮಾರಾಟ ಮಾಡಿದರು.

    ಸಂತೆಯಲ್ಲಿ ವೆಜಿಟೆಬಲ್ ಪಲಾವ್, ರೈಸ್‌ಬಾತ್, ಚಿತ್ರಾನ್ನ, ಮೊಸರನ್ನ, ಶೇಂಗಾ ಒಬ್ಬಟ್ಟು, ಎಳನೀರು, ಕಲ್ಲಂಗಡಿ, ಪಪ್ಪಾಯಿ, ಸೇಬು, ದ್ರಾಕ್ಷಿ, ಊಟಿ ಆ್ಯಪಲ್, ದಾಳಿಂಬೆ, ಸೀಬೆಕಾಯಿ ಗ್ರಾಹಕರನ್ನು ಬೀಸಿ ಕರೆಯುತ್ತಿದ್ದವು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಹಾಗೂ ಪಾಲಕರು ತಿಂಡಿ-ತಿನಿಸುಗಳನ್ನು ಖರೀದಿಸಿ ಮಕ್ಕಳ ವ್ಯಾಪಾರವನ್ನು ಪ್ರೋತ್ಸಾಹಿಸಿದರು.

    ದೇಸಿ ಆಟಗಳ ಪರಿಚಯ: ಮರೆಯಾಗುತ್ತಿರುವ ಗ್ರಾಮೀಣ ಆಟಗಳಾದ ಅಳಿಗುಳಿಮಣೆ, ಗೋಲಿ, ಲಗೋರಿ ಇನ್ನಿತರ ಮೋಜಿನ ಆಟಗಳನ್ನು ಮಕ್ಕಳಿಗೆ ಹಾಗೂ ಪಾಲಕರಿಗೆ ಆಯೋಜಿಸಿ ಬಹುಮಾನ ವಿತರಿಸಲಾಯಿತು. ರಂಗಾಯಣ ಕಲಾವಿದ ಕಿರಣ್ ಗಿರ್ಗಿ ಮಕ್ಕಳಿಂದ ಹಾಸ್ಯ ನಾಟಕ ಮಾಡಿಸಿದರೆ, ರಮೀಜ್ ಅಸ್ಮಿ ಪಾಶ್ಚಿಮಾತ್ಯ ನೃತ್ಯ ನಡೆಸಿಕೊಟ್ಟರು.

    ಅರ್ಥಪೂರ್ಣ ಕಾರ್ಯಕ್ರಮ: ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರ ಚತುರತೆ ಬೆಳೆಸುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ಅಭಿಪ್ರಾಯಪಟ್ಟರು.
    ಬಿಇಒ ನಾಗರಾಜ್, ತಾಪಂ ಮಾಜಿ ಸದಸ್ಯ ಹಂದನಹಳ್ಳಿ ಸೋಮಶೇಖರ್, ಪುರಸಭೆ ಮಾಜಿ ಸದಸ್ಯ ಗುರುಸ್ವಾಮಿ, ಸಂಸ್ಥೆಯ ಅಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ರೇಣುಕಾಮೂರ್ತಿ, ಮುಖ್ಯಶಿಕ್ಷಕಿ ವೀಣಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts