ರಾಜೀವ್​ ಗಾಂಧಿ ರಾಷ್ಟ್ರೀಯ ಉದ್ಯಾನದ ಪರಿಧಿಯಲ್ಲಿ ಕಲ್ಲುಗಣಿಗಾರಿಕೆ: ತಹಸೀಲ್ದಾರ್​ ದಾಳಿ

ಹುಣಸೂರು: ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನದ ಪರಿಧಿಯ ಪರಿಸರ ಸೂಕ್ಷ್ಮವಲಯ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಕೂಗಳತೆ ದೂರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತಹಸೀಲ್ದಾರ್ ಐ.ಇ.ಬಸವರಾಜು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲ್ಲುಗಣಿಗಾರಿಕೆ ನಡೆಯುತ್ತಿರುವ ಕುರಿತು ಮೇ 18ರ ವಿಜಯವಾಣಿ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಸಚಿತ್ರ ವರದಿ ಆಧರಿಸಿ ತಹಸೀಲ್ದಾರ್ ಅವರು, ವೀರನಹೊಸಳ್ಳಿ ವಲಯದ ಮಾದಳ್ಳಿ, ತುಪ್ಪದ ಕೊಳ, ಹಿಂಡುಗುಡ್ಲು ಮತ್ತು ಕಲ್ಲೂರಪ್ಪನ ಬೆಟ್ಟದ ತಪ್ಪಲಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಆದರೆ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡುವ ಕೆಲ ನಿಮಿಷಗಳ ಮೊದಲು ಕಲ್ಲುಗಳನ್ನು ಪುಡಿಗೊಳಿಸಲು ಅಣಿಯಾಗುತ್ತಿದ್ದ ಕೂಲಿಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದರು.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ತಹಸೀಲ್ದಾರ್, ಭಾನುವಾರ ಬೆಳಗ್ಗೆ ತಾವು ಈ ಭಾಗದ 7 ಕಡೆ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳವನ್ನು ಭೇಟಿ ಮಾಡಿದ್ದು, ಗಣಿಗಾರಿಕೆ ನಡೆಯುತ್ತಿರುವುದು ನಿಜ. ಆದರೆ ತಾವು ತಲುಪುವ ವೇಳೆ ಸ್ಥಳದಿಂದ ಕಾರ್ಮಿಕರು ಪರಾರಿಯಾಗಿದ್ದಾರೆ. 5 ಸುತ್ತಿಗೆ, 15ಕ್ಕೂ ಹೆಚ್ಚು ಉಳಿ, ಕಲ್ಲನ್ನು ಸ್ಫೋಟಿಸಲು ಬಳಸುವ ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗ್ಗೆ ಕೂಡ ಟ್ರಾೃಕ್ಟರ್ ಬಂದು ಹೋಗಿರುವ ಗುರುತುಗಳಿವೆ. ತಾವು ಜಾಗಕ್ಕೆ ಬರುತ್ತಿರುವ ಕುರಿತು ಯಾರಿಂದಲೋ ಮಾಹಿತಿ ತಿಳಿದು ಕಾರ್ಮಿಕರು ಜಾಗ ಖಾಲಿ ಮಾಡಿದ್ದಾರೆ ಎಂದು ಅನುಮಾನ ಮೂಡುತ್ತಿದೆ. ಗಣಿಗಾರಿಕೆ ಕುರಿತು ಅಕ್ಕಪಕ್ಕದ ಜಮೀನಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೈತರನ್ನು ಪ್ರಶ್ನಿಸಿದಾಗ ತಮಗೆ ಗೊತ್ತಿಲ್ಲವೆನ್ನುವ ಉತ್ತರ ನೀಡುತ್ತಿದ್ದಾರೆ ಎಂದರು.
ದಾಖಲೆ ಪರಿಶೀಲನೆ:
ಈ ಜಾಗ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಥವಾ ಬಫರ್ ಜೋನ್ ಆಗಿದೆಯೇ ಎನ್ನುವು ಕುರಿತು ದಾಖಲೆ ಪರಿಶೀಲನೆ ನಡೆಸುತ್ತೇನೆ. ಜಾಗ ಯಾರದ್ದೇ ಇರಲಿ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದರು.
ಕಾರಣ ಕೇಳಿ ನೋಟಿಸ್:
7 ಕಡೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಿದ್ದು, ತಮ್ಮ ಗಮನಕ್ಕೆ ಈ ವಿಷಯ ತರದಿರುವ ಹಾಗೂ ಅಧೀನ ಸಿಬ್ಬಂದಿ ಬೇಜವಾಬ್ದಾರಿ ವರ್ತನೆಯನ್ನು ಪ್ರಶ್ನಿಸಿ ಕರ್ತವ್ಯಲೋಪದ ಆಧಾರದಡಿ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *