ಮೂಲ ಸೌಕರ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ 

ಹುಣಸೂರು: ಪಟ್ಟಣದ ಮೆಟ್ರಿಕ್ ನಂತರದ ಪ.ಜಾತಿ, ಜನಾಂಗದ ವಿದ್ಯಾರ್ಥಿನಿಲಯದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದ್ದು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ನಿಲಯದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ನಿಲಯದಲ್ಲಿ 6ತಿಂಗಳಿಂದ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ವಾಟರ್ ಫಿಲ್ಟರ್ ದುರಸ್ತಿಯಾಗಿರುವ ಕಾರಣ ಟ್ಯಾಂಕ್‌ನಿಂದ ಬರುವ ನೀರನ್ನೇ ಕುಡಿಯುತ್ತಿದ್ದೇವೆ. ಸೋಲಾರ್ ಘಟಕ ದುರಸ್ತಿಯಲ್ಲಿರುವ ಕಾರಣ ಬಿಸಿನೀರು ಸಹ ಸಿಗುತ್ತಿಲ್ಲ ಎಂದು ನಿಲಯಾರ್ಥಿಗಳಾದ ದಿಲೀಪ್, ಕೆಂಡಗಣ್ಣಸ್ವಾಮಿ, ದೇವಪ್ರಸಾದ್, ರವಿ ಮತ್ತಿತರರು ಆರೋಪಿಸಿದರು.
ನಿಲಯದಲ್ಲಿ 61 ವಿದ್ಯಾರ್ಥಿಗಳಿಗೆ ಕೇವಲ 2 ಶೌಚಗೃಹಗಳಿವೆ. ಉಳಿಕೆ 6 ಶೌಚಗೃಹಗಳು ದುರಸ್ತಿಯಲ್ಲಿವೆ. ನಿಲಯದಲ್ಲಿ ಬೆಳಗ್ಗೆ 10ಗಂಟೆಯಾದರೂ ತಿಂಡಿ ಸಿಗುವುದಿಲ್ಲ. ಸಾಂಬಾರಿನಲ್ಲಿ ತರಕಾರಿಯೇ ಸಿಗುವುದಿಲ್ಲ. ನಿಲಯದ ಸುತ್ತ ಗಿಡಗಂಟಿ ಬೆಳೆದು ವಿಷ ಜಂತುಗಳ ಕಾಟ ಜಾಸ್ತಿಯಾಗಿದೆ. ಸಮಸ್ಯೆಗಳನ್ನು ವಾರ್ಡನ್ ಅವರಿಗೆ ತಿಳಿಸಿದರೆ ನಮ್ಮ ಬಾಯಿ ಮುಚ್ಚಿಸುತ್ತಾರೆ ಎಂದು ದೂರಿದರು.
ಪ್ರಭಾರ ನಿಲಯ ಮೇಲ್ವಿಚಾರಕ ಧರ್ಮರಾಜು ಸ್ಥಳಕ್ಕೆ ಆಗಮಿಸಿ ಕಟ್ಟಡವನ್ನು 9ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕ್ಷೇಮವಾಗಿರಲು ಎಲ್ಲ ರೀತಿಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಧರ್ಮರಾಜು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.