ಗಾವಡಗೆರೆಯಲ್ಲಿ ಕಾಲಭೈರವೇಶ್ವರ ಸ್ವಾಮಿ ಉತ್ಸವ

ಹುಣಸೂರು: ತಾಲೂಕಿನ ಗಾವಡಗೆರೆಯಲ್ಲಿ 14ನೇ ವರ್ಷದ ದೀಪಾವಳಿ ಅಮಾವಾಸ್ಯೆಯ ಅಂಗವಾಗಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನಂತರ ಉತ್ಸವ ಮೂರ್ತಿಯನ್ನು ಗ್ರಾಮದ ಕೆರೆಗೆ ತಂದು ಪೂಜೆ ಸಲ್ಲಿಸಿ ಬಳಿಕ ವಿಶೇಷ ಅಲಂಕಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಳಶ ಹೊತ್ತ ನೂರಾರು ಮಹಿಳೆಯರು, ದೇವರ ಗುಡ್ಡಪ್ಪರ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಉತ್ಸವ ಸಾಗುವ ಮಾರ್ಗದಲ್ಲಿ ಭಕ್ತರು ಪಟಾಕಿ ಸಿಡಿಸಿ ಸ್ವಾಮಿಗೆ ಜಯಕಾರ ಹಾಕಿ ಸಂಭ್ರಮಿಸಿದರು.

ಮೆರವಣಿಗೆ ಬಳಿಕ ಉತ್ಸವ ಮೂರ್ತಿಯನ್ನು ಸ್ವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಕೊನೆಯಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಭಕ್ತರು ಸ್ವಾಮಿ ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗಾಗಿ ತಮ್ಮ ಮೊದಲ ತಿಂಗಳ ವೇತನ 50 ಸಾವಿರ ರೂ.ಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಮುಳ್ಳೂರು ಗ್ರಾಮದ ಮಾಜಿ ಸೈನಿಕ ಬಲರಾಮ ರಾವ್ ಕ್ಷೀರಸಾಗರ್ ಅವರ ಪುತ್ರಿ ದೀಪಾ ಅವರನ್ನು ಶ್ರೀ ಕಾಲಭೈರವೇಶ್ವರ ಸ್ವಾಮಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಉತ್ಸವದಲ್ಲಿ ಟ್ರಸ್ಟ್ ಅಧ್ಯಕ್ಷ ರಾಜ್‌ಕುಮಾರ್ ಪವಾರ್, ಪ್ರಧಾನ ಕಾರ್ಯದರ್ಶಿ ಜಿ.ವಿ.ಶ್ರೀನಾಥ್, ಉಪಾಧ್ಯಕ್ಷ ವಿಠಲ್ ರಾವ್ ಪವಾರ್, ಖಜಾಂಚಿ ಹೊನ್ನಪ್ಪ ರಾವ್ ಕಾಳಿಂಗೆ, ಶ್ರೀನಾಥ್, ಭರತ್‌ರಾವ್, ಲಕ್ಷ್ಮಣರಾವ್ ಪವಾರ್, ರುಕ್ಮಾಂಗದ ರಾವ್ ಇತರರಿದ್ದರು.