ರಾಣಿ ಚನ್ನಮ್ಮ ದೇಶದ ಆಸ್ತಿ

ಹುನಗುಂದ:ಕಿತ್ತೂರು ಚನ್ನಮ್ಮನ ಹೆಸರು ಪಂಚಮಸಾಲಿ ಸಮಾಜಕ್ಕೆ ಅಭಿಮಾನ ಮತ್ತು ಹೆಮ್ಮೆ. ಕೆಚ್ಚೆದೆಯಿಂದ ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮ ದೇಶದ ಆಸ್ತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾ ಸಭಾ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ತೃತೀಯ ಪಂಚಮಸಾಲಿ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ನಿಸ್ವಾರ್ಥದಿಂದ ಹೋರಾಟ ಮಾಡಿದ ಚನ್ನಮ್ಮ ಹಾಗೂ ಅವರ ಬಲಗೈ ಬಂಟ ಸಂಗೊಳ್ಳಿ ರಾಯಣ್ಣರಂತೆ ನಾವೆಲ್ಲರೂ ಜಾತ್ಯತೀತ ಮನೋಭಾವದಿಂದ ಸಮಾನ ಬದುಕನ್ನು ಕಟ್ಟೋಣ ಎಂದರು.

ಚನ್ನಮ್ಮನ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಮಾತನಾಡಿದ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ, ಸಮಾಜಕ್ಕೆ ಯಾರೂ ದೊಡ್ಡವರಲ್ಲ. ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆಯಬೇಕು. ಶಿಕ್ಷಣಕ್ಕೆ ಒತ್ತು ನೀಡಿ ಸಮಾನತೆ ಬದುಕು ಸಾಗಿಸೋಣ ಎಂದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮುಂದಿನ ದಿನಗಳಲ್ಲಿ ಎಲ್ಲ ಜಾತಿ, ಸಮುದಾಯಗಳನ್ನು ಒಗ್ಗೂಡಿಸಿ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ. ಸಮಾಜದಲ್ಲಿ ಜಾತಿ ಒಡಕಿನ ಕಂದಕ ಸೃಷ್ಟಿಸಬಾರದು ಎಂದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಾಸ್ತಾವಿಕ ಮಾತನಾಡಿ, ಇದು ರಾಜಕೀಯ ಪ್ರೇರಿತ ಸಮಾವೇಶವಲ್ಲ. ಚನ್ನಮ್ಮನ ಸಾಹಸ ಪಂಚಮಸಾಲಿ ಸಮಾಜಕ್ಕೆ ಮೀಸಲಲ್ಲ.

ವೀರಮಾತೆ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ನೀಡಿ ಎಲ್ಲ ಸಮಾಜಕ್ಕೂ ಆದರ್ಶಪ್ರಾಯರಾಗಿದ್ದಾರೆ. ನಮ್ಮ ಸಮಾಜವನ್ನು ಒಬಿಸಿಗೆ ಸೇರಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿಕೊಂಡರು.

ಲೋಕಸಭಾ ಸದಸ್ಯ ಸಂಗಣ್ಣ ಕರಡಿ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಶಾಸಕಿ ಲಕ್ಷಿ್ಮೕ ಹೆಬ್ಬಾಳ್ಕರ್, ವಿನಯ ಕುಲಕರ್ಣಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಲ್ಲಣ್ಣ ನಾಡಗೌಡ, ಮಾಜಿ ಸಂಸದ ಶಿವರಾಮೇಗೌಡ ಇತರರಿದ್ದರು. ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ವಾಗತಿಸಿದರು. ವೀರೇಶ ವಾಲಿ ಸಂಗಡಿರು ರೈತಗೀತೆ ಹಾಡಿದರು. ಸಂಗಣ್ಣ ಗದ್ದಿ ನಿರೂಪಿಸಿದರು.