ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ

ಹುನಗುಂದ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒಗಳು ಸ್ಥಾನಿಕದಲ್ಲಿದ್ದು ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ ಹೇಳಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.
ಹಿರೇಕೊಡಗಲಿ ತಾಂಡಾ, ಮರೋಳ, ಕೋಡಿಹಾಳ, ನಂದವಾಡಗಿ, ಚಿಕನಾಳ, ಭೀಮನಗಡ ಮತ್ತು ಕೆಲೂರ ಸೇರಿದಂತೆ ಅತ್ಯವಶ್ಯವಿದ್ದ ಕಡೆಗಳಲ್ಲಿ ಬೋರ್‌ವೆಲ್ ಕೊರೆಸಿ ನೀರೊದಗಿಸುವಂತೆ ಗ್ರಾಮೀಣ ನೀರು ಸರಬರಾಜು ಉಪವಿಭಾಗ ಸಹಾಯಕ ಅಭಿಯಂತ ಎನ್.ಎಸ್. ಕೆರೂರ ಅವರಿಗೆ ತಿಳಿಸಿದರು.

ಬೇಸಿಗೆ ಮುಗಿಯುವವರೆಗೂ ಪಿಡಿಒಗಳು ಮತ್ತು ಗ್ರಾಪಂ ಸಿಬ್ಬಂದಿ ಸ್ಥಳದಲ್ಲಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಮಸ್ಯೆಗಳ ಪರಿಹಾರ ಮತ್ತು ಚರ್ಚೆ ಕುರಿತು ಸಂಪರ್ಕಿಸಲು ಎಲ್ಲ ಪಿಡಿಒಗಳು ತಮ್ಮ ಮೊಬೈಲ್ ಆನ್ ಇಡಬೇಕು. ತಪ್ಪಿದಲ್ಲಿ ಅಂತಹ ಪಿಡಿಒಗಳ ವಿರುದ್ಧ ಕ್ರಮ ಜರುಗಿಸುವಂತೆ ತಾಪಂ ಇಒಗಳಿಗೆ ತಿಳಿಸಿದರು.

ಕಂದಗಲ್ಲ ಮತ್ತು ಗೋನಾಳ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ನೀರಿನ ಸಂಗ್ರಹದ ಕೊರತೆ ಕಾಣುತ್ತದೆ. ಅಲ್ಲಿಯ ಜನರು ರಾಡಿ ಮಿಶ್ರಿತ ನೀರು ಕುಡಿದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ತಕ್ಷಣ ನೀರೊದಗಿಸುವ ವ್ಯವಸ್ಥೆಯಾಗಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಸುಭಾಷ ಸಂಪಗಾವಿ ಮಾತನಾಡಿ, ತಾಲೂಕು ವ್ಯಾಪ್ತಿಯ ಪುನರ್ವಸತಿ ಕೇಂದ್ರಗಳಲ್ಲಿ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ. ತಕ್ಷಣ ಗುರುತಿಸಿ ನೀರು ಸಂಪನ್ಮೂಲ ಇಲ್ಲವೆ ಟ್ಯಾಂಕರ್ ಮೂಲಕ ನೀರು ಕೊಡಬೇಕು. ಆ ಕುರಿತು ತಾಲೂಕು ಆಡಳಿತದೊಂದಿಗೆ ಪತ್ರ ವ್ಯವಹಾರ ಮಾಡಬೇಕು ಎಂದರು. ಎಲ್ಲ ಪಿಡಿಒಗಳು ತಮ್ಮ ಭಾಗದ ಸಮಸ್ಯೆಗಳನ್ನು ಮೇಲಧಿಕಾರಿಗಳ ಜತೆ ಹಂಚಿಕೊಂಡರು.

ನೀರಿ ತೊಟ್ಟಿ ನಿರ್ಮಿಸಿ
ತಾಪಂ ಇಒ ಪುಷ್ಪಾ ಕಮ್ಮಾರ ಮಾತನಾಡಿ, ಪಶು ಇಲಾಖೆ ನೀಡಿದ ಮಾಹಿತಿಯಂತೆ 321 ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕಿದ್ದು, ಎನ್‌ಆರ್‌ಇಜಿ ಯೋಜನೆ ಅಡಿ ಆಯಾ ಗ್ರಾಮಗಳ ಜಾನುವಾರುಗಳ ಸಂಖ್ಯೆಗನುಗುಣವಾಗಿ ನೀರಿನ ತೊಟ್ಟಿಗಳನ್ನು ತುರ್ತಾಗಿ ನಿರ್ಮಿಸಬೇಕು. ಬಾವಿಯಲ್ಲಿಯ ಹೂಳು ತೆಗೆಸಿ ನೀರು ಸಂಗ್ರಹ ಹೆಚ್ಚಿಸಬೇಕೆಂದು ಪಿಡಿಒಗಳಿಗೆ ಸೂಚಿಸಿದರು.

ಎರಡು ಕಡೆ ಗೋಶಾಲೆ ತೆರೆಯಲು ಪ್ರಸ್ತಾವನೆ
ತಾಲೂಕು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ಎಚ್. ಅಂಗಡಿ ಮಾತನಾಡಿ, ತಾಲೂಕಿನಾದ್ಯಂತ ಮೇವಿನ ಕೊರತೆ ಇಲ್ಲ ಎಂಬುದರ ಬಗ್ಗೆ ಸರ್ವೇ ಮಾಡಲಾಗಿದೆ. ತಾಲೂಕಿನ ಎರಡು ಕಡೆ ಗೋಶಾಲೆ ತೆರೆಯುವಂತೆ ಪ್ರಸ್ತಾವನೆ ಬಂದಿದೆ. ಸೂಕ್ತ ಸ್ಥಳ ಪರಿಶೀಲಿಸಿ ತೆರೆಯಲಾಗುವುದು. ಹೆಚ್ಚಿಗೆ ಮೇವು ಸಂಗ್ರಹವಿದ್ದವರಿಂದ ಟೆಂಡರ್ ದರದಂತೆ ಖರೀದಿಸಲಾಗುವುದು. ಎಪಿಎಂಸಿ ಹುನಗುಂದ, ಇಳಕಲ್ಲ ಮತ್ತು ಕರಡಿ ಹಾಗೂ ಅಮೀನಗಡ ರೈತ ಸಂಪರ್ಕ ಕೇಂದ್ರಗಳಲ್ಲಿ ಮೇವು ಬೇಕಾದವರು 2 ರೂ.ಗೆ 1ಕೆಜಿಯಂತೆ ಪಡೆಯಬಹುದು ಎಂದರು.