ಪೈಪ್ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಿ

ಹುನಗುಂದ: ನಾರಾಯಣಪುರ ಜಲಾಶಯ ಹಿನ್ನೀರಿನಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 329 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಜಮೀನುಗಳಲ್ಲಿ ಕೊಳವೆ ಮಾರ್ಗ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಸಭಾಭವನದಲ್ಲಿ ರೈತರ ಹಾಗೂ ಅಧಿಕಾರಗಳ ಸಭೆಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿನ ಯೋಜನೆಗೆ ತಾಲೂಕಿನ ರೈತರ ಜಮೀನುಗಳಲ್ಲಿ ಗುತ್ತಿಗೆದಾರರು 3 ಅಡಿ ವ್ಯಾಸದ ಕೊಳವೆ ಮಾರ್ಗ ಹಾಕಿದ್ದಾರೆ. ಈ ಕುರಿತು ರೈತರು ಪರಿಹಾರ ನೀಡುವಂತೆ ಗುತ್ತಿಗೆದಾರರು, ಅಧಿಕಾರಿಗಳನ್ನು ಕೇಳಿದರೆ ಪೊಲೀಸರಿಗೆ ದೂರು ನೀಡುವ ಬೆದರಿಕೆ ಹಾಕುತ್ತಿದಾರೆ ಎಂದು ರೈತ ಮುಖಂಡ ಗುರು ಗಾಣಿಗೇರ ಆರೋಪಿಸಿದರು.

10 ಅಡಿ ಆಳವಾಗಿ ತಗ್ಗು ಕೊರೆದಿದ್ದರಿಂದ ಭೂಮಿ ಮೇಲಿನ ಲವತ್ತತೆ ಹಾಳಾಗಿ ರೈತರು ಹಾನಿಗೊಳಗಾಗುತ್ತಾರೆ ಎಂದು ರೈತ ಶಶಿಕಾಂತ ಬಂಡರಗಲ್ಲ ದೂರಿದರು. ಸಭೆಯಲ್ಲಿ ಮೌನವಾಗಿದ್ದ ರೈತರ ಆರೋಪಗಳಿಗೆ ಅಧಿಕಾರಗಳು ಮೌನವಾಗಿಯೇ ಇದ್ದರು. ಈ ಮೌನ ಶಾಸಕ ದೊಡ್ಡನಗೌಡ ಪಾಟೀಲರನ್ನು ಕೆರಳಿಸಿತು. ಉತ್ತರ ನೀಡುವಂತೆ ಕಾಮಗಾರಿ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡ ಕುಷ್ಟಗಿ ಜಿಪಂ ಗ್ರಾಮೀಣ ಕುಡಿಯುವ ನೀರು ಪೂರೈಕೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಡಿ. ನಾಗೂರ ಅವರನ್ನು ತರಾಟೆಗೆ ತೆಗೆದುಕೊಂಡರು.

ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿರುವುದರಿಂದ ರಸ್ತೆ ಮಧ್ಯಭಾಗದಿಂದ 13 ಮೀಟರ್ ಒಳಗೆ ಕೊಳಗೆ ಹಾಕಬಾರದು, ಕೊಳವೆ ಮಾರ್ಗವನ್ನು ರೈತರ ಜಮೀನುಗಳಲ್ಲಿ ಅಳವಡಿಸಿದರೆ ಅವರಿಗೆ ಕಡ್ಡಾಯವಾಗಿ ಪರಿಹಾರ ಮತ್ತು ನಿರ್ವಹಣೆ ಮಾಡಬೇಕೆಂದು ಇಂಜಿನಿಯರ್ ವಿ.ಎಂ. ತಿರಗನಗೌಡರಿಗೆ ಶಾಸಕರು ತಾಕೀತು ಮಾಡಿದರು.

ಯೋಜನೆಯ ಗುತ್ತಿಗೆದಾರರು ಯೋಜನೆಯಡಿ ರೈತರಿಗೆ ಪರಿಹಾರ ನೀಡುವ ಅವಕಾಶವಿಲ್ಲ ಎಂದು ಉತ್ತರಿಸುತ್ತಿದ್ದಂತೆ ರೈತರು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್ ವೇದವ್ಯಾಸ ಮುತಾಲಿಕ, ಪಿಡಬ್ಲುೃಡಿ ಕಾರ್ಯನಿರ್ವಾಹಕ ಕೆ.ಎಸ್. ಕೂಟಗಿ, ರೈತ ಮುಖಂಡರಾದ ಮಾರ್ತಂಡರಾವ್ ದೇಸಾಯಿ, ಶರಣಗೌಡ ಗೌಡರ, ಹುಲಗಪ್ಪ ಕೊಣ್ಣೂರ, ಮುತ್ತಣ್ಣ ಪಾಟೀಲ, ಅಡಿವೆಪ್ಪ ತೋಟದ, ಶಿವಣ್ಣ ವಾಲಿಕಾರ, ಬಸನಗೌಡ ಗೌಡರ, ಹುಚ್ಚಯ್ಯ ವಸದ ಇತರರು ಇದ್ದರು.

ಜನರಿಗೆ ಕುಡಿಯುವ ನೀರು ಕೊಡುವುದಕ್ಕೆ ನನ್ನ ಹಾಗೂ ತಾಲೂಕಿನ ರೈತರ ವಿರೋಧವಿಲ್ಲ. ಆದರೆ ರೈತರಿಗೆ ಪರಿಹಾರ ಕೊಡುವಲ್ಲಿ ನಿರ್ಲಕ್ಷೃ ವಹಿಸಿದರೆ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
-ದೊಡ್ಡನಗೌಡ ಪಾಟೀಲ ಶಾಸಕ