ಶುದ್ಧ ನೀರು ಉಳಿಸಿಕೊಳ್ಳಲು ಮಾನವ ಕುಲ ವಿಫಲ

ಯಳಂದೂರು: ವಿಶ್ವದಲ್ಲಿ ಜೀವ ಜಲ ಬರಿದಾಗುತ್ತಿದೆ. ನಮ್ಮ ಬಳಕೆಗೆ ಯೋಗ್ಯವಾದ ಶುದ್ಧ ನೀರನ್ನು ಉಳಿಸಿಕೊಳ್ಳಲು ಮಾನವಕುಲ ವಿಫಲವಾಗುತ್ತಿದೆ. ಮುಂದೊಂದು ದಿನ ವಿಶ್ವದಲ್ಲಿ ಸಮರ ನಡೆದರೆ ಅದು ಜೀವಜಲಕ್ಕಾಗಿ ಮಾತ್ರ ಎಂಬ ನುಡಿ ಸನ್ನಿಹಿತವಾಗಿದ್ದು ಮಾನವ ಕುಲ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಿವಿಲ್ ನ್ಯಾಯಾಧೀಶ ಎನ್. ಶರತ್‌ಚಂದ್ರ ಸಲಹೆ ನೀಡಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾನವ ಶೇ. 70 ರಷ್ಟು ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾನೆ. ಶೇ. 20 ರಷ್ಟು ನೀರು ಕೈಗಾರಿಕೆಗಳಿಗೆ ಬಳಕೆಯಾಗುತ್ತಿದೆ. ಇದರಲ್ಲಿ ಶೇ. 10 ರಷ್ಟರಲ್ಲಿ ಶೇ.1 ರಷ್ಟು ಶುದ್ಧಜಲ ಮನುಷ್ಯ ಬಳಸಿಕೊಳ್ಳುತ್ತಿದ್ದಾನೆ. ಈಗ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ 2050 ರ ಹೊತ್ತಿಗೆ ಭೂಮಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಲಿದೆ. ಹಾಗಾಗಿ ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ವಕೀಲ ಬಿ.ಎಂ.ಮಹದೇವಸ್ವಾಮಿ ಮಾತನಾಡಿ, ವಿಶ್ವಸಂಸ್ಥೆಯ ಪ್ರಕಾರ ಪ್ರತಿನಿತ್ಯ ಒಬ್ಬ ವ್ಯಕ್ತಿಗೆ 52 ರಿಂದ 55 ಲೀ. ನೀರು ಬೇಕಾಗುತ್ತದೆ. ಆದರೆ ನೀರಿನ ಬಳಕೆ ಹೆಚ್ಚಾಗಿ ಮಾಡಲಾಗುತ್ತಿದೆ. ಇದು ನೈಸರ್ಗಿಕ ಸಂಪತ್ತಾಗಿದೆ. ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇರುವ ನೀರಿನ ಬಳಕೆ ಮಿತವಾಗಿರಬೇಕು. ನಾವು ಬೆಳೆಯುವ ಬೆಳೆಗಳಿಗೂ ಅಗತ್ಯಕ್ಕಿಂತ ಹೆಚ್ಚಿನ ನೀರಿನ ಬಳಕೆ ಸಲ್ಲದು. ಅಧುನಿಕ ಕೃಷಿ ಪದ್ಧತಿ ಬಳಸಿಕೊಂಡು ನೀರಿನ ಬಳಕೆ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಕೀಲ ಎಂ.ಮಾದೇಶ್ ಮಾತನಾಡಿ, ನೀರು ಕಲುಷಿತಗೊಳಿಸುವ ಕೆಲಸ ಗ್ರಾಮೀಣ ಭಾಗದಲ್ಲೂ ಹೆಚ್ಚಾಗುತ್ತಿದೆ. ಚರಂಡಿ ನೀರನ್ನು ನಾವು ನಾಲೆಗಳು, ಕಾಲುವೆಗಳು, ನದಿಗಳಿಗೆ ಬಿಡುವ ಚಾಳಿಯನ್ನು ಮಾಡುತ್ತಿದ್ದೇವೆ. ದಿನನಿತ್ಯ ನಿರಂತರವಾಗಿ ಭೂಮಿಯನ್ನು ಮಲಿನಗೊಳಿಸುವ ಕೆಲಸವಾಗುತ್ತಿದೆ. ಮನುಷ್ಯನ ಸ್ವಾರ್ಥಕ್ಕೆ ಕಾಡು ಬಯಲಾಗುತ್ತಿದೆ. ಜೀವಜಲವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಸ್ಯ ಸಂಪತ್ತು ನಾಶವಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಕಳೆದ ವರ್ಷ ಕೊಡಗು, ಕೇರಳದಲ್ಲಿ ಆದ ಅತಿವೃಷ್ಟಿ ನಮ್ಮ ಮುಂದಿನ ದೊಡ್ಡ ಉದಾಹರಣೆಯಾಗಿದೆ. ಇಡೀ ವಾತಾವರಣವನ್ನು ಸಂರಕ್ಷಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ಆಗಬೇಕಿದೆ ಎಂದರು.

ವಕೀಲ ಸಂಘದ ಕಾರ್ಯದರ್ಶಿ ಶಾಂತರಾಜು ಮಾತನಾಡಿದರು. ವಕೀಲರಾದ ಸಿ. ಮಹದೇವಸ್ವಾಮಿ, ಶಾಂತಮೂರ್ತಿ, ಕಾಂತರಾಜು ಹರಿಶ್ಚಂದ್ರ, ರಂಗಸ್ವಾಮಿ ಗುರು ಇತರರು ಇದ್ದರು.