ಅಗ್ಗಿ ತುಳಿದ ಲಕ್ಷಾಂತರ ಭಕ್ತರು

ವಿಜಯವಾಣಿ ಸುದ್ದಿಜಾಲ ಹುಮನಾಬಾದ್
ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಥೇರ್ ಮೈದಾನದ ಅಗ್ನಿ ಕುಂಡದಲ್ಲಿ ಶನಿವಾರ ಅಪಾರ ಭಕ್ತ ಸಮೂಹದ ಮಧ್ಯೆ ಅಗ್ಗಿ ತುಳಿಯುವ ಕಾರ್ಯಕ್ರಮ ನೆರವೇರಿತು. ಶುಕ್ರವಾರ ರಾತ್ರಿ ವೀರಭದ್ರೇಶ್ವರ ದೇವಸ್ಥಾನದಿಂದ ಥೇರ್ ಮೈದಾನದಲ್ಲಿರುವ ಅಗ್ನಿ ಕುಂಡದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಶನಿವಾರ ಬೆಳಗ್ಗಿನ ಜಾವ ಅಗ್ನಿಕುಂಡದಲ್ಲಿ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ ಸಾನಿಧ್ಯದಲ್ಲಿ ಪೂಜೆ ನೆರವೇರಿದ ಬಳಿಕ ಅಗ್ಗಿ ತುಳಿಯುವ ಕಾರ್ಯ ಆರಂಭವಾಯಿತು.
ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಸೇರಿ ಮಕ್ಕಳು, ಮಹಿಳೆಯರು, ಭಕ್ತರು ಅಗ್ಗಿ ತುಳಿದರು. ನಸುಕಿನ ಜಾವವೇ ಆರಂಭವಾದ ಕಾರ್ಯಕ್ರಮ ಶನಿವಾರ ಮಧ್ಯರಾತ್ರಿವರೆಗೆ ನಡೆಯಿತು. ಕರ್ನಾಟಕ ಸೇರಿ ತೆಲಂಗಾಣ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು.
ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಪಂ ಸದಸ್ಯ ವೀರಣ್ಣ ಪಾಟೀಲ್ ಸೇರಿ ವಿವಿಧ ರಾಜಕೀಯ ಪಕ್ಷದ ಮುಖಂಡರು, ಗಣ್ಯರು, ಭಕ್ತರು ದರ್ಶನ ಪಡೆದರು. ಸ್ವಯಂ ಸೇವಕರು ಭಕ್ತರನ್ನು ಸಾಲು ನಿಲ್ಲಿಸುವುದರಲ್ಲಿ ಹಾಗೂ ಸರದಿಯಂತೆ ಬಿಡುವುದರಲ್ಲಿ ತೊಡಗಿರುವುದು ಕಂಡುಬಂದಿತು.

ಬಿಗಿ ಬಂದೋಬಸ್ತ್:  ಜಾತ್ರೆ ನಡೆಯುವ ಪ್ರಮುಖ ಸ್ಥಳಗಳು ಸೇರಿ ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಡಿವೈಎಸ್ಪಿ ಮಹೇಶ್ವರಪ್ಪ ನೇತೃತ್ವದಲ್ಲಿ ಸಿಪಿಐ ಜೆ.ಎಸ್.ನ್ಯಾಮಗೌಡರು, ದಿಗಂಬರ ಮಡಿವಾಳ, ಮಲ್ಲಿಕಾರ್ಜುನ ಯಾತನೂರ, ಅಲಿಸಾಬ್, ಪಿಎಸ್ಐಗಳಾದ ಸಂತೋಷ ತಟಪಳ್ಳಿ, ಜಿ.ಎಂ.ಪಾಟೀಲ್, ರವಿಕುಮಾರ, ಮಹಾಂತೇಶ ಲಂಬಿ, ಬಸವರಾಜ ಪೂಜಾರಿ, ಪ್ರಕಾಶ ಯಾತನೂರ ಇತರರು ಬಂದೋಬಸ್ತ್ ಉಸ್ತುವಾರಿ ನೋಡಿಕೊಂಡರು. ಅಗ್ನಿಕುಂಡ ಸೇರಿ ಹಲವು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ವಾಹನಗಳಿಗೆ ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹಸಿವು ತಣಿಸಿದ ದಾಸೋಹ: ವೀರಭದ್ರೇಶ್ವರ ಜಾತ್ರೆ ನಿಮಿತ್ತ ಪಟ್ಟಣದ ವಿವಿಧೆಡೆ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ದಾಸೋಹದಲ್ಲಿ ಅಸಂಖ್ಯಾತ ಭಕ್ತರು ಪ್ರಸಾದ ಸ್ವೀಕರಿಸಿದರು. ವೀರಭದ್ರೇಶ್ವರ ದೇವಸ್ಥಾನ, ಚಿದ್ರಿ ಕಾಂಪ್ಲೆಕ್ಸ್ ಎದುರು, ಶಿವಚಂದ್ರ ವೃತ್ತದ ಬಳಿ, ಅಗಡಿ ಲೇಔಟ್, ಜೇರಪೇಟ, ಜೈನ ಮಂದಿರ, ಹನುಮಾನ ಮಂದಿರ, ಕಲ್ಲೂರ ರಸ್ತೆ, ಅರಣ್ಯ ಇಲಾಖೆ, ಜಿಪಂ, ಭೂಸೇನಾ ನಿಗಮ ಕಚೇರಿ ಆವರಣ ಸೇರಿ ವಿವಿಧೆಡೆ ಬೆಳಗ್ಗೆಯಿಂದ ರಾತ್ರಿವರೆಗೆ ಉಚಿತ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಜ್ಜೆ ಹಾಗೂ ಜೋಳದ ರೊಟ್ಟಿ, ಚಿತ್ರಾನ್ನ, ಹುಗ್ಗಿ, ಭಜ್ಜಿ ಪಲ್ಲೆ, ಉಪ್ಪಿನ ಕಾಯಿ, ಮಿರ್ಚಿ ಭಜಿ, ಮಜ್ಜಿಗೆ ಸೇರಿ ವಿವಿಧ ಖಾದ್ಯಗಳ ರುಚಿಯನ್ನು ಭಕ್ತರು ಸವಿದರು. ದಾಸೋಹದಲ್ಲಿ ನೂರಾರು ಕ್ವಿಂಟಾಲ್ ಅಕ್ಕಿ ಹಾಗೂ ಜೋಳ ಬಳಸಲಾಗಿದೆ. ಈ ಬಾರಿ ಹೋಳಿಗೆ ತುಪ್ಪ ಹಾಗೂ ಹುಗ್ಗಿ ವಿಶೇಷವಾಗಿತ್ತು.