ಮಾನವನ ತ್ಯಾಜ್ಯ ಸಂಪನ್ಮೂಲವಾಗಿ ಬಳಕೆಯಾಗಲಿ

ಮೈಸೂರು: ಮಾನವನ ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಕೆ ಮಾಡಿದರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಪರಿಸರ ತಜ್ಞ ಯು.ಆರ್.ರವಿಕುಮಾರ್ ಹೇಳಿದರು.

ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್ ವತಿಯಿಂದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಶೌಚಗೃಹ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೈರ್ಮಲ್ಯಕ್ಕಾಗಿ ಶೌಚಗೃಹ ಉಪಯೋಗಿಸುವ ನಾವು ಕುಡಿಯುವ ನೀರನ್ನೇ ಶೌಚಕ್ಕೆ ಬಳಸುತ್ತಿದ್ದೇವೆ. ಇದು ಅಂತರ್ಜಲ, ಕೆರೆ, ನದಿಗಳಿಗೆ ಸೇರಿ ಕಲುಷಿತಗೊಳಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ. ಶೌಚಗೃಹ ಬಳಕೆಯಲ್ಲಿ ಮುಂದಿರುವವರು ಈ ವಿಚಾರ ಮನಗಂಡು, ಶೌಚಗೃಹ ಸುಸ್ಥಿರ ನಿರ್ವಹಣೆಗೆ ಒತ್ತು ನೀಡಬೇಕು. ನಾವು ಬಳಸುವ ಶೌಚಗೃಹ ಪರಿಸರ ಸ್ನೇಹಿಯಾಗಿರುವಂತೆ ನಿರ್ವಹಿಸಬೇಕು. ಮಲ, ಮೂತ್ರವನ್ನು ತ್ಯಾಜ್ಯವೆಂದು ಭಾವಿಸದೆ ಸಂಪನ್ಮೂಲವನ್ನಾಗಿ ನೋಡಬೇಕು. ಆಗ ಮಾತ್ರ ಉತ್ತಮ ಬದಲಾವಣೆ ಸಾಧ್ಯ ಎಂದರು.

ಚೀನಾದಲ್ಲಿ ಮಲ, ಮೂತ್ರ ಸಂಗ್ರಹಿಸಿ ಗೊಬ್ಬರವನ್ನಾಗಿ ಬಳಸುತ್ತಾರೆ. ತಮಿಳುನಾಡಿನ ತಂಜಾವೂರಿನಲ್ಲಿ, ಸ್ಕೋಪ್ ಸಂಸ್ಥೆ ಗಂಗಾನದಿ ತಟದಲ್ಲಿ 6 ಸಾವಿರಕ್ಕೂ ಹೆಚ್ಚು ಶೌಚಗೃಹಗಳನ್ನು ನಿರ್ಮಿಸಿದ್ದು, ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುತ್ತಿದೆ. ಇಲ್ಲಿ ಶೌಚ ಮಾಡಿ ಹೋಗುವವರಿಗೇ 1ರೂ.ನೀಡಲಾಗುತ್ತದೆ ಎಂದರು.

ಎಚ್.ಡಿ.ಕೋಟೆ ತಾಲೂಕಿನಲ್ಲೂ 600ಕ್ಕೂ ಹೆಚ್ಚು ಶೌಚಗೃಹಗಳಲ್ಲಿ ಮಾನವ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವಾಗಿ ಬಳಸಲಾಗುತ್ತಿದೆ. ಹೊಸಹಳ್ಳಿ ಗ್ರಾಮದ ಜನತೆ ತಮ್ಮ ಮನೆಗಳ ಶೌಚಗೃಹದಲ್ಲಿನ ತ್ಯಾಜ್ಯವನ್ನು ಗೊಬ್ಬರ ಮಾಡಿ ಬಳಸುತ್ತಿದ್ದಾರೆ ಎಂದರು.

ಜಿಪಂ ಸಿಇಒ ಜ್ಯೋತಿ ಮಾತನಾಡಿ, ವಿಶ್ವಸಂಸ್ಥೆ 2001ರಲ್ಲಿ ನೈರ್ಮಲ್ಯ ಯೋಜನೆ ಅಭಿಯಾನ ಆರಂಭಿಸಿ, 2012ರಲ್ಲಿ ವಿಶ್ವ ಶೌಚಗೃಹ ದಿನವನ್ನು ಅಧಿಕೃತವಾಗಿ ಘೋಷಿಸಿತು. ಇದನ್ನು ಎಲ್ಲ ರಾಷ್ಟ್ರ, ಜಿಲ್ಲೆಗಳು ಅನುಷ್ಠಾನಗೊಳಿಸಿದವು. ಆರೋಗ್ಯವಂತ ಸಮಾಜ ದೇಶಕ್ಕೆ ಮುಖ್ಯ ಎಂಬುದೇ ಇದರ ಉದ್ದೇಶ ಎಂದರು.

ಇದೇ ವೇಳೆ ಸ್ಪಂದನ ಕಲಾತಂಡ ಹಾಗೂ ಅನಿಕೇತನ ಕಲಾ ಬಳಗದ ವತಿಯಿಂದ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೂರಾರು ಶೌಚಗೃಹ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳು, ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು.

ಮಹಾಬೋಧಿ ಶಾಲೆ, ಜೆಎಸ್‌ಎಸ್ ಶಾಲೆ ವಿದ್ಯಾರ್ಥಿಗಳು ಸರಸ್ವತಿಪುರಂನಿಂದ ಕಲಾಮಂದಿರದವರೆಗೆ ವಿಶ್ವ ಶೌಚಗೃಹ ದಿನನದ ಅಂಗವಾಗಿ ರ‌್ಯಾಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಸದಸ್ಯರಾದ ಕೃಷ್ಣ, ಮಂಗಳಾ ಸೋಮಶೇಖರ್, ಮಣಿ ಇತರರು ವೇದಿಕೆಯಲ್ಲಿದ್ದರು.