ಬೆಚ್ಚಿಬೀಳಿಸುವ ಮಹಿಳಾ ಕಳ್ಳಸಾಗಾಣಿಕೆ ಕರಾಳ ದಂಧೆ!

ಬೆಂಗಳೂರು: ಮಹಿಳೆಯರನ್ನು ವೇಶ್ಯಾವಾಟಿಕೆ ದಂಧೆಗೆ ದೂಡುವ, ಕಳ್ಳಸಾಗಾಣಿಕೆ ಮಾಡುವ ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿದ್ದು, ಮಾಧ್ಯಮಗಳಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳುವುದರ ಮೂಲಕ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ. ಜಯಮಾಲಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ಆತ್ಮಕಥೆಗಳು ಸಾಧ್ಯತೆ ಮತ್ತು ಸವಾಲು ಕುರಿತಾದ ವಿಚಾರ ಸಂಕಿರಣದಲ್ಲಿ ಈ ವಿಷಯ ತಿಳಿಸಿದ ಅವರು, ದಮನಿತ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಮಾಜದ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.

ಹಿಂದೆ ಸರ್ಕಾರವೇ ಲೈಂಗಿಕ ಕಾರ್ಯಕರ್ತೆಯರ ಜೀವನದ ಕುರಿತು ಅಧ್ಯಯನ ನಡೆಸಲು ಸೂಚಿಸಿದಾಗ 22 ಜನರ ತಂಡದೊಂದಿಗೆ 30 ಜಿಲ್ಲೆಗಳ 94 ಗ್ರಾಮಗಳಿಗೆ ಭೇಟಿ ನೀಡಲಾಗಿತ್ತು. ಲೈಂಗಿಕ ಕಾಯಕರ್ತೆಯರು, ದೇವದಾಸಿ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಅಂಥವರ ಬದುಕನ್ನು ಒಳಗಣ್ಣಿನಿಂದ ನೋಡಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಹೇಳಿದರು.

ಅಧ್ಯಯನದ ಸಂದರ್ಭದಲ್ಲಿ 11,100 ಮಹಿಳೆಯರಿಂದ ಮಾಹಿತಿ ಪಡೆದು ವರದಿ ಸಿದ್ಧಪಡಿಸಲಾಯಿತು. ರಾಜ್ಯದಲ್ಲಿ 1.05 ಲಕ್ಷ ದಮನಿತ ಮಹಿಳೆಯರು (ಲೈಂಗಿಕ ಕಾರ್ಯಕರ್ತೆಯರು), 2.50 ಲಕ್ಷ ಎಚ್​ಐವಿ ಸೋಂಕಿತ ಮಹಿಳೆಯರು, 46,664 ದೇವದಾಸಿ ಮಹಿಳೆಯರು ಇರುವ ಅಧಿಕೃತ ಮಾಹಿತಿ ಇದೆ. 11 ರಿಂದ 16 ವರ್ಷದ ಹೆಣ್ಣುಮಕ್ಕಳನ್ನು ದಂಧೆಗೆ ದೂಡುವ ಪ್ರಯತ್ನಗಳು ಹೆಚ್ಚಿವೆ. ಈ ಎಲ್ಲ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆಯಿದೆ. ಮಹಿಳೆಯರ ರಕ್ಷಣೆಗೆ ರಾಜ್ಯ ಸರ್ಕಾರ ಜಿಲ್ಲಾ ಕೋಶಗಳನ್ನು ರಚಿಸಿದೆ. ಜತೆಗೆ ಎಲ್ಲ ಕಾಯ್ದೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಮೊಮ್ಮಗಳೊಂದಿಗೆ ನ್ಯೂಯಾರ್ಕ್​ಗೆ ತೆರಳಿದ ಸಂದರ್ಭದಲ್ಲಿ ನಾನು ಭಾರ್ಗವಿ ಬರೆದಿದ್ದೆ, ಮನೆಯಲ್ಲಿ ಹೊತ್ತುಕಳೆಯಲು ಆರಂಭಿಸಿದ ಬರವಣಿಗೆ ಪುಸ್ತಕದ ರೂಪ ಪಡೆಯಿತು. ಕನ್ನಡಿಗರು ಅದನ್ನು ಒಪ್ಪಿ ಮೆಚ್ಚಿದ ಪರಿ ನನ್ನನ್ನು ಭಾವುಕಳನ್ನಾಗಿಸಿತು.

| ಭಾರ್ಗವಿ ನಾರಾಯಣ್ ಹಿರಿಯ ಕಲಾವಿದೆ

ಜಾಗತಿಕವಾಗಿ ಮಹಿಳೆಯರು ಎದುರಿಸುವ ಸಮಸ್ಯೆಗಳು ಒಂದೇ ರೀತಿಯಾಗಿವೆ. ವಿಜಯಮ್ಮ, ಭಾರ್ಗವಿ ಅವರ ಆತ್ಮಕಥೆಗಳು ಮಹಿಳೆಯರಿಗೆ ದನಿಯಾಗಿವೆ.

| ಪ್ರತಿಭಾ ನಂದಕುಮಾರ್ ಹಿರಿಯ ಕವಯಿತ್ರಿ

ಇತ್ತೀಚೆಗೆ ಖ್ಯಾತಿ ಪಡೆದಿರುವ ಮೀಟೂ ನಮ್ಮ ಜೀವನದಲ್ಲಿ ಸಾಕಷ್ಟು ನಡೆದಿದ್ದು, ಅವುಗಳಿಗೆ ದಿಟ್ಟತನದಿಂದ ಉತ್ತರ ನೀಡಿ ಮುನ್ನುಗ್ಗಿ ಜೀವನ ನಡೆಸಿದ್ದೇನೆ.

| ಡಾ. ವಿಜಯಾ ಹಿರಿಯ ಪತ್ರಕರ್ತೆ