More

    ಮಾನವ ಕಳ್ಳಸಾಗಣೆ ದಂಧೆ; ವಾರ್ಷಿಕ 500ಕ್ಕೂ ಹೆಚ್ಚು ಕೇಸ್, ದಾಖಲಾಗುವುದು ಐದಾರು ಮಾತ್ರ

    ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದರೂ ಮಾನವ ಕಳ್ಳಸಾಗಾಣಿಕೆಗೆ ಕಡಿವಾಣ ಬಿದ್ದಿಲ್ಲ. ಕೆಲಸ ಕೊಡಿಸುವ ನೆಪದಲ್ಲಿ, ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿಯರನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುವ ಜಾಲಗಳು ಆಳವಾಗಿ ಬೇರೂರಿವೆ.

    ಪೊಲೀಸ್ ಇಲಾಖೆ ನೀಡುವ ಮಾಹಿತಿ ಪ್ರಕಾರ, ರಾಜ್ಯಾದ್ಯಂತ ಪ್ರತಿನಿತ್ಯ ಕನಿಷ್ಠ ಇಬ್ಬರು,ಮೂವರು ಯುವತಿಯರು ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕುತ್ತಿದ್ದಾರೆ. ಆದರೆ ವೈಯಕ್ತಿಕ ಕಾರಣ, ಪ್ರಾಣಭಯ, ಬೆದರಿಕೆ, ಬ್ಲಾ್ಯಕ್​ವೆುೕಲ್ ಹಿನ್ನೆಲೆಯಲ್ಲಿ ಬಹುತೇಕ ಪ್ರಕರಣಗಳು ಠಾಣೆ ಮೆಟ್ಟಿಲೇರುವುದಿಲ್ಲ. ಪೊಲೀಸ್ ಇಲಾಖೆ ಅಂಕಿ-ಅಂಶಗಳ ಪ್ರಕಾರ ಬೆಳಕಿಗೆ ಬರುತ್ತಿರುವುದು ವಾರ್ಷಿಕ 5ರಿಂದ10 ಕೇಸ್​ಗಳು ಮಾತ್ರ. ಕಳ್ಳಸಾಗಣೆ ಮಾಡಿದ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲಾಗುತ್ತದೆ ಎಂಬುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.

    ಬಡವರೇ ಟಾರ್ಗೆಟ್: ನಗರ ಹಾಗೂ ಗ್ರಾಮೀಣ ಭಾಗದ ಕುಟುಂಬಗಳನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಪಾಲಕರಿಗೆ ಒಂದಷ್ಟು ಹಣ ಕೊಟ್ಟು ಮನೆ ಕೆಲಸ ಕೊಡಿಸುವುದಾಗಿ, ಬ್ಯೂಟಿ ಪಾರ್ಲರ್, ಟೇಲರಿಂಗ್ ಕೆಲಸ ಕೊಡಿಸುವುದಾಗಿ ನಂಬಿಸಿ ಹೆಣ್ಣು ಮಕ್ಕಳನ್ನು ಕರೆದೊಯ್ಯಲಾಗುತ್ತದೆ. ಮಧ್ಯವರ್ತಿಗಳ ಮುಖಾಂತರ ಈ ಜಾಲದ ಕಾರ್ಯಾಚರಣೆ ನಡೆಯುತ್ತದೆ. ಇದಕ್ಕಾಗಿ ಕಮೀಷನ್ ನೀಡಲಾಗುತ್ತದೆ.

    ಯಾವ ದೇಶಗಳಿಗೆ ಸಾಗಾಟ?: ಕುವೈತ್, ಕತಾರ್, ದುಬೈ, ಸೌದಿ ಅರೇಬಿಯಾ, ಓಮನ್ ಸೇರಿ ಅರಬ್ ದೇಶಗಳಿಗೆ ಭಾರತದಿಂದ ಹೆಚ್ಚಾಗಿ ಮಾನವ ಕಳ್ಳಸಾಗಣೆ ಮಾಡಲಾಗುತ್ತದೆ. ಈವರೆಗೆ ಹೋಗಿರುವ ನೂರಾರು ಯುವತಿಯರು ಅಲ್ಲಿನ ಕಿರುಕುಳದಿಂದ ತಪ್ಪಿಸಿಕೊಂಡು ವಾಪಸ್ ಸ್ವದೇಶಕ್ಕೆ ಬರಲು ಮೊರೆಯಿಡುತ್ತಿದ್ದಾರೆ. ಆದರೆ, ಪಾಸ್​ಪೋರ್ಟ್ ಹಾಗೂ ನೈಜ ದಾಖಲೆಗಳು ಮಾಲೀಕರ ಬಳಿಯಿರುವ ಕಾರಣ ಮರಳಲಾಗುತ್ತಿಲ್ಲ. ಏಜೆಂಟ್ ಮೂಲಕ ಜುಲೈ 24ರಂದು ಕೆಲಸಕ್ಕೆಂದು ಕುವೈತ್​ಗೆ ಹೋಗಿದ್ದ ನಾಗವಾರದ ತಾಯಿ-ಮಗಳು ಪರಿಚಿತರಿಗೆ ಕರೆ ಮಾಡಿ ತಮ್ಮನ್ನು ಇಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವುದು ಇದಕ್ಕೆ ಉದಾಹರಣೆ.

    ನಿಗ್ರಹ ಘಟಕ: ಯುವತಿಯರು ಮತ್ತು ಮಹಿಳೆಯರ ಕಳ್ಳಸಾಗಣೆ ಚಟುವಟಿಕೆ ಮೇಲೆ ನಿಗಾ ವಹಿಸಲು ಹಾಗೂ ಅವರಿಗೆ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಮಾನವ ಕಳ್ಳಸಾಗಾಣಿಕೆ ನಿಗ್ರಹ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ.

    ಅಪ್ರಾಪ್ತರ ಸಾಗಣೆ

    ಜಾಲಕ್ಕೆ ತುತ್ತಾಗುತ್ತಿರುವ ಪ್ರತಿ ಮೂವರ ಪೈಕಿ ಒಬ್ಬರು ಅಪ್ರಾಪ್ತರು ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಭಾರತ, ಪಾಕ್, ಬಾಂಗ್ಲಾದೇಶದಿಂದ ಹೆಚ್ಚು ಮಾನವ ಕಳ್ಳಸಾಗಣೆ ನಡೆಯುತ್ತಿದ್ದು, 2010ರಿಂದ ಇದರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಲೈಂಗಿಕ ಉದ್ದೇಶಕ್ಕಾಗಿ ಕಳ್ಳಸಾಗಣೆ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.

    ಯಾವ ರಾಜ್ಯದಲ್ಲಿ ಅಧಿಕ?

    ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ಅಸ್ಸಾಂ, ಜಾರ್ಖಂಡ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ ಹಾಗೂ ಕೇರಳ ನಂತರದ ಸ್ಥಾನದಲ್ಲಿವೆ.

    ಪ್ರಕರಣ 1

    ತುಮಕೂರು ಮೂಲದ ತಾಯಿ ಮತ್ತು ಮಗಳು ನಾಗವಾರದ ಸಮೀಪದ ಅಶ್ವತ್ಥನಗರದಲ್ಲಿ ನೆಲೆಸಿದ್ದರು. ಈ ವೇಳೆ ಪರಿಚಯವಾಗಿದ್ದ ಸೈಯ್ಯದ್ ಖಾದರ್, ಕುವೈತ್​ನಲ್ಲಿ ಒಳ್ಳೆ ಸಂಬಳ ಸಿಗುವ ಕೆಲಸವಿದೆ ಎಂದು ನಂಬಿಸಿದ್ದ. ಈತನ ಮಾತು ಕೇಳಿ ತಾಯಿ, ಮಗಳು ಜುಲೈ 24ರಂದು ಕುವೈತ್​ಗೆ ಹೋಗಿದ್ದರು. ಇತ್ತೀಚೆಗೆ ಪರಿಚಿತರಿಗೆ ಕರೆ ಮಾಡಿದ್ದ ತಾಯಿ, ಮಗಳು ತಮಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಅಲವತ್ತುಕೊಂಡಿದ್ದಾರೆ. ಇದು ಹೆಣ್ಣೂರು ಪೊಲೀಸರ ಗಮನಕ್ಕೆ ಬಂದು ತಮಿಳುನಾಡು ಮೂಲದ ಏಜೆಂಟ್ ಸೈಯ್ಯದ್ ಖಾದರ್​ನನ್ನು ಬಂಧಿಸಿದ್ದಾರೆ. ಸದ್ಯ ರಾಯಭಾರ ಕಚೇರಿ ಮೂಲಕ ತಾಯಿ, ಮಗಳನ್ನು ಕುವೈತ್​ನಿಂದ ಕರೆಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣ 2

    ಇಂಜಿನಿಯರಿಂಗ್, ಎಂಬಿಎ ಇನ್ನಿತರ ಪದವಿ ಮತ್ತು ಸ್ನಾತಕೋತ್ತರ ಪದವಿ ಓದಿದ ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ನೇಪಾಳ ಮೂಲದ ಬಾಬು ಗಿರಿ ಎಂಬಾತ ಮಾಲ್ಡಿವ್ಸ್​ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 9 ಮಂದಿ ನೇಪಾಳಿಗಳಿಂದ 5 ಲಕ್ಷ ರೂ. ಪಡೆದಿದ್ದ. ಇತ್ತೀಚೆಗೆ ಅವರನ್ನು ಚಿಕ್ಕಜಾಲ ಬಳಿಯಿರುವ ಲಾಡ್ಜ್​ನಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದ. ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಿಚಾರಣೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ.

    ಪ್ರಕರಣ 3

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಬ್ಬರು ಮಹಿಳೆಯರನ್ನು ಪ್ರವಾಸಿ ವೀಸಾದಡಿ ಶ್ರೀಲಂಕಾಕ್ಕೆ ಕರೆದೊಯ್ದು, ಅಲ್ಲಿಂದ ಉದ್ಯೋಗದ ವೀಸಾದಡಿ ಕುವೈತ್​ಗೆ ಕಳುಹಿಸಿ ಮಾನವ ಕಳ್ಳಸಾಗಣೆ ನಡೆಸಲು ಮುಂದಾಗಿದ್ದ ಮೂವರು ಮಧ್ಯವರ್ತಿಗಳು ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

    ಸಾರ್ವಜನಿಕರಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ. ನಮ್ಮ ಗಮನಕ್ಕೆ ಬಂದ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಸಂತ್ರಸ್ತರನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ.

    | ಎಸ್.ಮುರುಗನ್ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) 

    | ಅವಿನಾಶ ಮೂಡಂಬಿಕಾನ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts