More

    ಮಾನವ, ನಿಸರ್ಗ ಹಾಗೂ ಭಗವಂತ ಆಧ್ಯಾತ್ಮಿಕ ತ್ರಿಕೋನ

    ಮಾನವ, ನಿಸರ್ಗ ಹಾಗೂ ಭಗವಂತ ಆಧ್ಯಾತ್ಮಿಕ ತ್ರಿಕೋನಮಾನವನು ನಿಸರ್ಗದ ಮೂಲಕ ಭಗವಂತನನ್ನು ಅರಿಯಬಹುದು. ನಿಸರ್ಗಕ್ಕೆ ಸನ್ನಿಹಿತವಾಗಿರುವಾಗ ನಮ್ಮ ಅಂತರಂಗದಲ್ಲಿ ಅಲೌಕಿಕ ಆನಂದದ ಅನುಭವವಾಗುತ್ತದೆ. ಈ ಆನಂದವು ಭಗವಂತನ ಸಾನ್ನಿಧ್ಯದ ಸವಿಯನ್ನು ಎತ್ತಿ ತೋರುತ್ತದೆ.

    ನಿಸರ್ಗದ ಅನಂತತೆ, ಸೌಂದರ್ಯ ಹಾಗೂ ನಿಗೂಢತೆಗಳು ಮಾನವನಲ್ಲಿ ಸೃಷ್ಟಿಕರ್ತನಾದ ಭಗವಂತನ ಬಗ್ಗೆ ಕುತೂಹಲವನ್ನು ಕೆರಳಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಸೃಷ್ಟಿಕರ್ತನೊಬ್ಬನಿದ್ದಾನೆಯೇ? ಇದ್ದರೆ, ಅವನ ಸ್ವರೂಪವೇನು? ಅವನನ್ನು ತಿಳಿಯುವುದು ಹೇಗೆ? ಇತ್ಯಾದಿ ಪ್ರಶ್ನೆಗಳು ಮಾನವನ ಅಂತರಂಗದಲ್ಲಿ ಮೂಡುವುದು ಸಹಜವಷ್ಟೆ. ಇಂತಹ ಪ್ರಶ್ನೆಗಳೊಂದಿಗೆ ಮಾನವನ ಭಗವದನ್ವೇಷಣೆಯು ಪ್ರಾರಂಭವಾಗಿ, ಅದರಿಂದ ಮಾನವ-ನಿಸರ್ಗ-ಭಗವಂತ ತ್ರಿಕೋನವು ಉದ್ಭವವಾಗುತ್ತದೆ. ಈ ತ್ರಿಕೋನವೇ ಜಗತ್ತಿನ ಎಲ್ಲಾ ತತ್ತ್ವಜ್ಞಾನಗಳಿಗೆ ಆಧಾರ.

    ಋಗ್ವೇದದ ಹಿರಣ್ಯಗರ್ಭ ಸೂಕ್ತದಲ್ಲಿ ಬರುವ ಈ ಶ್ಲೋಕದಲ್ಲಿ ಹೇಳಿರುವಂತೆ:

    ಹಿರಣ್ಯಗರ್ಭ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕಾಸೀತ !

    ಸ ದಾಧಾರ ಪೃಥ್ವೀಂ ಧ್ಯಾಮುತೇಮಾಂ ಕಸ್ಮೈ ದೇವಾಯಹವಿಷಾ ವಿಧೇಮ !!

    ‘ಜೀವಿಗಳ ಸೃಷ್ಟಿಗಿಂತ ಆದಿಯಲ್ಲಿ ಪಂಚಭೂತಗಳಿಗೆ ಒಡೆಯನಾಗಿ, ಭೂಮಿ ಮತ್ತು ಸ್ವರ್ಗಗಳಿಗೆ ಆಧಾರವಾಗಿ ನಿಂತ ದೇವನೊಬ್ಬನಿದ್ದ. ಅವನಲ್ಲದೆ ಬೇರೆ ಯಾರಿಗೆ ನಾವು ಹವಿಸ್ಸುಗಳನ್ನು ಸಮರ್ಪಿಸಿ ಪೂಜಿಸೋಣ?’

    ಹೀಗೆ, ಈ ಸೃಷ್ಟಿಗೆ ಕಾರಣವಾಗಿ ಹಿನ್ನೆಲೆಯಲ್ಲಿ ನಿಂತಿರುವ ಭಗವಂತನನ್ನು ಪೂಜಿಸಬೇಕೆಂಬ ಹಂಬಲವು ಆದಿಕಾಲದಿಂದಲೂ ಮಾನವನ ಹೃದಯದಲ್ಲಿ ಮುಂದುವರಿದುಕೊಂಡು ಬಂದಿದೆ. ಮಾನವನು ನಿಸರ್ಗದೊಂದಿಗೆ ಹೆಚ್ಚೆಚ್ಚು ನಿಕಟ ಸಂಬಂಧವನ್ನು ಬೆಳೆಸಿಕೊಂಡಾಗ, ಈ ಹಂಬಲವು ಹೆಚ್ಚೆಚ್ಚು ಉತ್ಕಟವಾಗಿ, ತಾನು ಭಗವಂತನನ್ನು ಅರಿತು ಪ್ರತ್ಯಕ್ಷವಾಗಿ ದರ್ಶಿಸಬೇಕೆಂಬ ವ್ಯಾಕುಲತೆಯು ಬೆಳೆಯುತ್ತದೆ.

    ನಿಸರ್ಗದಲ್ಲಿ ವನರಾಶಿಯ ಮಧ್ಯೆ, ಹರಿಯುವ ನದಿ ಅಥವಾ ಭೋರ್ಗರೆವ ಸಾಗರದ ದಡದಲ್ಲಿ ನಿಂತು ಏಕಾಗ್ರವಾಗಿ ದೃಷ್ಟಿಯನ್ನು ಹಾಯಿಸಿದಾಗ, ನಮ್ಮ ಮನಸ್ಸು ಸಹಜವಾಗಿ ಅಂತಮುಖತೆ ಹೊಂದಿ ಒಂದು ರೀತಿಯ ಅಪೂರ್ವ ಪ್ರಶಾಂತತೆಯನ್ನು ಅನುಭವಿಸುತ್ತೇವೆ. ಸೂರ್ಯೋದಯ-ಸೂರ್ಯಾಸ್ತಗಳನ್ನು, ಆಕಾಶದಲ್ಲಿ ಬೆಳಗುವ ಚಂದ್ರ ಯಾ ಮಿನುಗುವ ನಕ್ಷತ್ರಗಳನ್ನು ನೋಡುತ್ತಾ ಅವುಗಳಲ್ಲಿಯೇ ತಲ್ಲೀನರಾದಾಗ, ತಂಪಾದ ಗಾಳಿ ನಮ್ಮ ಮೈಯ್ಯನ್ನು ಹಿತವಾಗಿ ನೇವರಿಸಿದಾಗ ಅಥವಾ ವರ್ಷದ ಮೊದಲ ಮಳೆಯು ನಮ್ಮ ದೇಹವನ್ನು ತಣಿಸಿದಾಗ ನಮ್ಮ ಅಂತರಂಗವನ್ನು ಒಂದು ರೀತಿಯ ಅವರ್ಣನೀಯ ಆನಂದವು ಆವರಿಸುತ್ತದೆ. ಅಂತೆಯೇ ಅರಳಿದ ಪುಷ್ಪ, ಹಾರುವ ಬಣ್ಣಬಣ್ಣದ ರೆಕ್ಕೆಯ ಚಿಟ್ಟೆ, ಚಿಲಿಪಿಲಿಗುಟ್ಟುವ ಹಕ್ಕಿಗಳು ಅಥವಾ ವಸಂತ ಋತುವಿನಲ್ಲಿ ಚಿಗುರೊಡೆದ ಗಿಡಮರಗಳನ್ನು ಕಂಡಾಗಲೂ ನಮ್ಮ ಹೃದಯದಲ್ಲಿ ಒಂದು ಸುಂದರ ಸುಮಧುರ ಅನುಭವದ ಆವಿರ್ಭಾವವಾಗುತ್ತದೆ. ಇಂತಹ ಅನುಭವಗಳು ನಮ್ಮ ಮತ್ತು ನಿಸರ್ಗದ ನಡುವಿನ ಪರಸ್ಪರ ಅವಿನಾಭಾವ ಸಂಬಂಧ ಹಾಗೂ ಏಕತೆಯನ್ನು ನಮ್ಮ ಅರಿವಿಗೆ ತರುತ್ತವೆ. ನಾವು ನಿಸರ್ಗದಲ್ಲಿ ಆ ಕ್ಷಣಗಳಲ್ಲಿ ನಮ್ಮ ಪ್ರತಿಬಿಂಬವನ್ನೇ ಕಾಣುತ್ತೇವೆ.

    ಉಪನಿಷತ್ತುಗಳು ಸಾರುವಂತೆ, ನಾವೆಲ್ಲರೂ ಒಂದೇ ಮೂಲದಿಂದ ಬಂದಿದ್ದು, ನಮ್ಮ ಭೌತಿಕ ಸ್ವರೂಪಗಳು ಅದೇ ಪಂಚ ಮಹಾಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶಗಳಿಂದಲೇ ಮಾಡಲ್ಪಟ್ಟಿವೆ. ತೈತ್ತಿರೀಯ ಉಪನಿಷತ್ತು ಜಗತ್ತಿನ ಸೃಷ್ಟಿಯ ವಿಧಾನವನ್ನು ಹೀಗೆ ವರ್ಣಿಸಿದೆ:

    ಆಕಾಶಾತ್ ವಾಯುಃ ! ವಾಯೋರಗ್ನಿಃ ಅಗ್ನೇರಾಪಃ ! ಅದ್ಭ್ಯಃ ಪೃಥಿವೀ ! ಪೃಥಿವ್ಯಾ ಓಷಧಯಃ ! ಓಷಧೀಭ್ಯಃ ಅನ್ನಮ್ ! ಅನ್ನಾತ್ ಪುರುಷಃ !

    ‘ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿಂದ ಪೃಥ್ವಿ, ಪೃಥ್ವಿಯಿಂದ ಸಸ್ಯಗಳು, ಸಸ್ಯಗಳಿಂದ ಅನ್ನ ಹಾಗೂ ಅನ್ನದಿಂದ ಮಾನವನು ಉದ್ಭವವಾಗುತ್ತಾನೆ.’

    ಹೇಗೆ ಕನ್ನಡಿಯಲ್ಲಿ ನಾವು ನಮ್ಮ ಪ್ರತಿಬಿಂಬವನ್ನು ನೋಡಿ ಆನಂದಿಸುತ್ತೇವೆಯೋ, ಹಾಗೆಯೇ ನಿಸರ್ಗವನ್ನು ನೋಡುತ್ತಾ, ನಮ್ಮ ಮನಸ್ಸು ಅದರಲ್ಲಿಯೇ ತಲ್ಲೀನ ವಾದಾಗ, ಅಲ್ಲಿಯೂ ನಮ್ಮ ಪ್ರತಿಬಿಂಬವನ್ನೇ ಕಂಡು ಆನಂದ ಅನುಭವಿಸುತ್ತೇವೆ.

    ನಿಸರ್ಗ ಹಾಗೂ ಅದರಲ್ಲಿನ ಪಂಚ ಮಹಾಭೂತಗಳು ಹುಟ್ಟಿದ್ದು ಸರ್ವಕ್ಕೂ ಮೂಲವಾದ ಭಗವಂತ ಅಥವಾ ಆತ್ಮನಿಂದ. ವಿಶ್ವದ ಸೃಷ್ಟಿಗಿಂತ ಮೊದಲು ಇದ್ದವನು ಆತ್ಮನೊಬ್ಬನೇ ಎಂದು ಐತರೇಯ ಉಪನಿಷತ್ತು ತಿಳಿಸಿ, ಆತ್ಮನು ಹೇಗೆ ಸೃಷ್ಟಿಕಾರ್ಯವನ್ನು ಮಾಡಿದನೆಂಬುದನ್ನು ವರ್ಣಿಸುತ್ತದೆ. ಮೊದಲು ಪ್ರಕೃತಿಯ ವಿವಿಧ ಅಂಗಗಳ ಸೃಷ್ಟಿ, ಅಂತ್ಯದಲ್ಲಿ ಪ್ರಕೃತಿಗೆ ಮುಕುಟಪ್ರಾಯನಾದ ಮಾನವನ ಆವಿರ್ಭಾವ. ಮಾನವನು ‘ನಾನು ಯಾರು?’ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡಾಗ, ‘ನಾನು ನನ್ನ ದೇಹೇಂದ್ರಿಯಗಳಿಗಿಂತಲೂ ಹಾಗೂ ಮನಸ್ಸಿಗಿಂತಲೂ ಮಿಗಿಲಾದವನು’ ಎಂಬ ಅರಿವು ಅವನಲ್ಲುಂಟಾಯಿತು. ಇನ್ನೂ ಆಳವಾಗಿ ಧ್ಯಾನಿಸಿದಾಗ, ನಾನು ಎಲ್ಲವನ್ನೂ ಅರಿಯಬಲ್ಲ ಪ್ರಜ್ಞಾಸ್ವರೂಪನೇ ಎಂಬುದು ಅವನಿಗೆ ಅನುಭವವೇದ್ಯವಾಯಿತು. ಯಾವುದೇ ರೂಪ-ನಾಮಗಳಿಗೆ ಸೀಮಿತವಾಗದ ಹಾಗೂ ಎಲ್ಲಾ ರೂಪ-ನಾಮಗಳಿಗೆ ಅತೀತವಾದ ಈ ಪ್ರಜ್ಞೆಯೇ ವಿಶ್ವಾದಿಮೂಲನಾದ ಆತ್ಮನ ಅಥವಾ ಭಗವಂತನ ಸ್ವರೂಪ. ಇದನ್ನೇ ಐತರೇಯ ಉಪನಿಷತ್ತು ‘ಪ್ರಜ್ಞಾನಂ ಬ್ರಹ್ಮ’ ಎಂದು ಘೊಷಿಸಿದೆ. ಈ ಪ್ರಜ್ಞೆಯೇ ಓತಪ್ರೋತವಾಗಿ ವಿಶ್ವದ ಕಣಕಣವನ್ನೂ ವ್ಯಾಪಿಸಿದೆ.

    ಹೀಗೆ ಪ್ರಜ್ಞಾಸ್ವರೂಪನಾದ ಭಗವಂತನು ಸೃಷ್ಟಿಯಾದ ಪ್ರಕೃತಿಯ ಅಥವಾ ನಿಸರ್ಗದ ಮೂಲ, ಹಾಗೂ ಮಾನವನು ಪ್ರಕೃತಿಯ ವಿಕಾಸದ ಮುಕುಟಮಣಿ ಅಥವಾ ನಿಸರ್ಗದ ಕೊನೆಯ ಶಿಶು. ಭಗವಂತ-ನಿಸರ್ಗ-ಮಾನವ – ಇದು ಸೃಷ್ಟಿಯ ಸರಪಳಿ. ಮಾನವನು ಭಗವಂತನನ್ನು ಅರಿಯಬೇಕಾದರೆ, ತಾನು ಬಂದ ದಾರಿಯಲ್ಲಿಯೇ ಹಿಂತಿರುಗಬೇಕು; ಎಂದರೆ, ಮಾನವನು ನಿಸರ್ಗದ ಮೂಲಕ ಭಗವಂತನನ್ನು ಸೇರಬಹುದು. ಆದ್ದರಿಂದಲೇ ನಾವು ನಿಸರ್ಗಕ್ಕೆ ಸನ್ನಿಹಿತವಾಗಿರುವಾಗ, ನಮ್ಮ ಅಂತರಂಗದಲ್ಲಿ ಅಲೌಕಿಕ ಆನಂದದ ಅನುಭವವಾಗುತ್ತದೆ. ಆನಂದೋ ಬ್ರಹ್ಮೇತಿ ವ್ಯಜಾನಾತ್, ಎಂದು ತೈತ್ತಿರೀಯ ಉಪನಿಷತ್ತು ಘೊಷಿಸಿದೆ. ಎಂದರೆ, ಆನಂದವೇ ಬ್ರಹ್ಮನ ಸ್ವರೂಪ. ನಿಸರ್ಗದ ಸಾಮೀಪ್ಯದಲ್ಲಿ ನಮಗೆ ಅನುಭವವಾಗುವ ಆನಂದವು ಭಗವಂತನ ಸಾನ್ನಿಧ್ಯದ ಸವಿಯನ್ನು ಎತ್ತಿ ತೋರುತ್ತದೆ. ಆದ್ದರಿಂದಲೇ, ನಮ್ಮ ಎಲ್ಲಾ ವಿದ್ಯಾನಿವೇಶನಗಳೂ ಪ್ರಾಚೀನ ಭಾರತದ ಗುರುಕುಲಗಳ ಮಾದರಿಯಲ್ಲಿ ನಿಸರ್ಗದ ಮಡಿಲಿನಲ್ಲಿಯೇ ನೆಲೆಯಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ನಿಸರ್ಗದ ಸಾಮೀಪ್ಯದ ಆನಂದವನ್ನು ಸವಿದು ತನ್ಮೂಲಕ ಭಗವಂತನ ಸಾನ್ನಿಧ್ಯವನ್ನು ಅನುಭವಿಸುವ ಅವಕಾಶಗಳು ದಿನನಿತ್ಯವೂ ಲಭ್ಯವಿವೆ.

    ಇಂದಿನ ಪ್ರಪಂಚದಲ್ಲಿ ಹವಾಮಾನ ಬದಲಾವಣೆ ಮತ್ತು ವೈಪರೀತ್ಯಗಳಿಂದಾಗಿ ನಿಸರ್ಗದ ಸಂರಕ್ಷಣೆ ಮನುಕುಲದ ಉಳಿವಿಗೆ ಅನಿವಾರ್ಯವಾಗಿದ್ದು, ನಿಸರ್ಗ ಹಾಗೂ ಮಾನವನ ಸಂಬಂಧದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿರುವುದಂತೂ ನಿಜ. ಇದರ ಜೊತೆಗೆ ಆಧ್ಯಾತ್ಮಿಕ ದೃಷ್ಟಿಕೋನವೂ ಸೇರಿ, ಮಾನವ, ನಿಸರ್ಗ ಹಾಗೂ ಭಗವಂತ – ಒಂದೇ ತ್ರಿಕೋನದ ಮೂರು ಶೃಂಗಗಳೆಂಬ ಅರಿವು ಮೂಡಿದಾಗ ನಮ್ಮ ಜೀವನ ಹೆಚ್ಚು ಆನಂದಮಯವಾಗುವುದರಲ್ಲಿ ಸಂದೇಹವಿಲ್ಲ. ನಾವು ಶಾಲಾ-ಕಾಲೇಜುಗಳಲ್ಲಿ ಇಂದು ಬೋಧಿಸುತ್ತಿರುವ ಪರಿಸರ ವಿಜ್ಞಾನ ವಿಷಯಗಳಿಗೆ (ಉಡಜ್ಟಿಟ್ಞಞಛ್ಞಿಠಿಚ್ಝ ಖ್ಚಜಿಛ್ಞಿ್ಚಠ) ಅಧ್ಯಾತ್ಮದ ಲೇಪವಾದಾಗ, ನಾವು ಸಹಜವಾಗಿ ನಿಸರ್ಗದೆಡೆಗೆ ಹೆಚ್ಚಿನ ಪ್ರೇಮವನ್ನು ಬೆಳೆಸಿಕೊಳ್ಳುವುದಲ್ಲದೆ, ನಮ್ಮ ಪರಸ್ಪರ ಸಂಬಂಧಗಳಲ್ಲಿಯೂ ಹೆಚ್ಚಿನ ಸಮರಸವು ಮೂಡುತ್ತದೆ. ಇಂತಹ ಪ್ರೇಮ-ಸಮರಸಮಯ ಜೀವನದಿಂದ ನಮಗೆ ಸುಲಭವಾಗಿ ಭಗವಂತನ ಸಾನ್ನಿಧ್ಯವೂ ಲಭ್ಯವಾಗುತ್ತದೆ!

    ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಆಗಮನ ಸಾಧ್ಯತೆ; ಕರ್ನಾಟಕಕ್ಕೆ ಯಾವಾಗ ಮಾನ್ಸೂನ್ ಪ್ರವೇಶ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts