ಬೇಲೂರು: ಮಾನವ-ಆನೆ ಸಂಘರ್ಷ ಇಂದು, ನಿನ್ನೆಯ ಸಮಸ್ಯೆಯಲ್ಲ. ಇದೊಂದು ರೀತಿ ನೂರಾರು ವರ್ಷಗಳ ಇತಿಹಾಸವಿರುವ ಗೋಳಾಟ ಎಂದೇ ಹೇಳಬಹುದು. ಕಾಡಾನೆಗಳ ಹಿಂಡು ರೈತರ ಹೊಲ, ಗದ್ದೆ, ಜಮೀನಿನಲ್ಲಿ ಆಹಾರ ಅರಸಿ ಬರುವುದು ಸಾಮಾನ್ಯ. ಒಂದು ಎಕರೆಯ ಬೆಳೆಯಲ್ಲಿ ಅರ್ಧಪಾಲು ಆನೆಗಳ ಆಹಾರವಾದರೂ ಬೇಸರವಿಲ್ಲ. ಉಳಿದದ್ದನ್ನು ಹೇಗೋ ಸರಿಪಡಿಸಿಕೊಳ್ಳುತ್ತೀವಿ ಎನ್ನುವ ರೈತರ ಬಯಕೆಗಳು ಅಂದುಕೊಂಡಂತೆ ಈಡೇರುವುದಿಲ್ಲ. ಒಂದೆರೆಡು ಕಾಡಾನೆಗಳು ನುಗ್ಗಿದರೆ ಆಗಬಹುದೇನೋ. ಆದರೆ, ಹಿಂಡು ಏಕಾಏಕಿ ತೋಟಗಳಿಗೆ ನುಸುಳಿದರೆ ರೈತರು ಏನು ಮಾಡಲು ಸಾಧ್ಯ? ಇಲ್ಲಿ ರೈತಾಪಿ ವರ್ಗ ಸಂಪೂರ್ಣ ಅಸಹಾಯಕ.
ಇದನ್ನೂ ಓದಿ: ನಾನು ಹೇಳ್ತಿದ್ದೀನಿ ನಿನ್ನ ತಂದೆ-ತಾಯಿಯನ್ನು ಕೊಲ್ಲು… ಬಾಲಕನಿಗೆ ಸಲಹೆ ಕೊಟ್ಟ ಎಐ! ನಂತರ ನಡೆದಿದ್ದಿಷ್ಟು… AI Chatbot
ಮಲೆನಾಡು ಪ್ರದೇಶಗಳಲ್ಲಿ ಅಧಿಕ
ಆನೆಗಳ ಹಾವಳಿ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ. ಕಾಡಾನೆ ಎಂದೇ ಹಣೆಪಟ್ಟಿ ಪಡೆದಿರುವ ಇವುಗಳು, ಕಾಡನ್ನು ಅರಸಿಯೇ ಆಹಾರ ಹುಡುಕಿ ಬರುತ್ತವೆ. ಆದರೆ, ಕಣ್ಣಿಗೆ ಸಿಗುವುದು ರೈತರ ಜಮೀನುಗಳಾಗಿವೆ. ಹಾಸನದ ಸಕಲೇಶಪುರ, ಬೇಲೂರು ತಾಲೂಕಿನ ಗ್ರಾಮಗಳಲ್ಲಿ ಹೆಚ್ಚಾಗಿ ಕೇಳಿಬರುವ ಆನೆ-ಮಾನವ ಸಂಘರ್ಷಗಳಿಗೆ ಇಲ್ಲೊಂದು ಘಟನೆ ಮತ್ತೊಂದು ಬಲವಾದ ಸಾಕ್ಷಿಯಾಗಿ ನಿಂತಿದೆ. ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಹಿರಿಗರ್ಜೆ ಗ್ರಾಮದ ರೈತ ವೀರಭದ್ರ ಎಂಬುವವರ ಗದ್ದೆ ಮತ್ತು ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಫಸಲಿಗೆ ಬಂದಿದ್ದ ಕಾಫಿ ಮತ್ತು ಅಡಿಕೆ ಬೆಳೆಯನ್ನು ಬಹುತೇಕ ನಾಶಪಡಿಸಿವೆ.
ರೈತ ಕುಟುಂಬ ಕಣ್ಣೀರು
ಕಳೆದ ಒಂದು ವಾರದಿಂದ ಆನೆಗಳ ಸಂಚಾರ ಗ್ರಾಮದಲ್ಲಿ ಕಂಡುಬಂದಿದ್ದೇ ಆದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆಗ್ರಹ. ವೀರಭದ್ರಪ್ಪ ಅವರಿಗೆ ಸೇರಿದ ಅಡಿಕೆ, ಕಾಫಿ ತೋಟ ಸೇರಿದಂತೆ ಗದ್ದೆಯಲ್ಲಿ ಬೆಳೆದಿದ್ದ ಭತ್ತವನ್ನು ಕೂಡ ಆನೆಗಳ ಹಿಂಡು ನಾಶಪಡಿಸಿವೆ. ತಡರಾತ್ರಿ ಕಾಡಾನೆಗಳ ಹಾವಳಿಯಿಂದ ಇಂತಹ ಪರಿಸ್ಥಿತಿ ಎದುರಾಗಿದೆ. ಹಗಲಿರುಳು ನೋಡದೆ, ಕುಟುಂಬದವರ ಶ್ರಮದಿಂದ ಬೆಳೆದ ಬೆಳೆ ಈಗ ನಾಶವಾಗಿರುವುದನ್ನು ಕಂಡು ನಾವು ಕಂಗಾಲಾಗಿದ್ದೇವೆ ಎಂದು ರೈತ ವೀರಭದ್ರ ಕಣ್ಣೀರಿಟ್ಟಿದ್ದಾರೆ.
ಅಲಾರಂ ಆಗಬೇಕು ಅರಣ್ಯ ಇಲಾಖೆ
ಇಂತಹ ಘಟನೆಗಳು ಸಂಭವಿಸುವ ಮುನ್ಸೂಚನೆ ಬಗ್ಗೆ ಮಾಹಿತಿ ಪಡೆಯುವ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಿನಲ್ಲಿರುವ ಆನೆಗಳು ನಾಡಿನತ್ತ ಬರದಂತೆ ತಡೆಗಟ್ಟಲು ಬೇಕಿರುವ ಅಗತ್ಯ ಮತ್ತು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ವರ್ಷಗಳ ಶ್ರಮ ಕಾಡಾನೆಗಳ ಹಾವಳಿಯಿಂದ ನಾಶವಾದ ಸಂಗತಿಯನ್ನು ತಾಳಲಾರದ ರೈತರು, ಏನಾದರೂ ಅನಾಹುತ ಮಾಡಿಕೊಳ್ಳುವ ಮುಂಚಿತವಾಗಿಯೇ ಇಲಾಖೆ ಎಚ್ಚೆತ್ತುಕೊಳ್ಳಬೇಕು. ರಾತ್ರಿ ಗಸ್ತು ತಿರುಗುವಿಕೆ, ಆನೆಗಳಿರುವ ಸ್ಥಳದ ಮಾಹಿತಿ, ಇರುವ ಸ್ಥಳದಲ್ಲಿ ಸಿಬ್ಬಂದಿಗಳ ಹೈಅಲರ್ಟ್ ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ಇಲಾಖೆ ಮುಂಚೂಣಿಯಲ್ಲಿರುವುದು ಈ ರೀತಿಯ ಘಟನೆಗಳ ನಿಯಂತ್ರಣಕ್ಕೆ ಸಹಾಯವಾಗುತ್ತದೆ.
ಇಂದೇ ‘ದಾಸ’ನ ಜಾಮೀನು ಭವಿಷ್ಯ: ಬೇಲ್ ಸಿಗದಿದ್ರೆ ಆರೋಪಿ ದರ್ಶನ್ ಮುಂದಿರುವ ಕೊನೇ ಆಯ್ಕೆಗಳಿವು