ರೋಣ: ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದ ಇಬ್ಬರು ಶಿಕ್ಷಕರನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಆಡಳಿತ ಮಂಡಳಿ ನೀತಿಗೆ ತಾಲೂಕಿನ ಹುಲ್ಲೂರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಪಾಲಕರು ಶ್ರೀ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಪ್ರೌಢ ಶಾಲೆಗೆ ಬುಧವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಹುಲ್ಲೂರ ಗ್ರಾಮದ ಪ್ರೌಢ ಶಾಲೆಯ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯದ ಇಬ್ಬರು ಶಿಕ್ಷಕರನ್ನು ಹೊಳೆಆಲೂರಿನ ಶ್ರೀ ಕಲ್ಮೇಶ್ವರ ಪ್ರೌಢ ಶಾಲೆಗೆ ಮತ್ತು ಹೊಳೆಆಲೂರ ಶಾಲೆಯ ಇಬ್ಬರು ಶಿಕ್ಷಕರನ್ನು ಹುಲ್ಲೂರ ಶಾಲೆಗೆ ಅದಲು ಬದಲು (ಪರಸ್ಪರ ವರ್ಗಾವಣೆ) ಮಾಡಿ ಆದೇಶ ಹೊರಡಿಸಿದ್ದರು. ಇದನ್ನು ಖಂಡಿಸಿ ಹುಲ್ಲೂರ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬಿಇಒ ರುದ್ರಪ್ಪ ಹುರಳಿ ಅವರು ಪ್ರತಿಭಟನಾಕಾರರೊಂದಿಗೆ ರ್ಚಚಿಸಿದರು. ಈ ಕುರಿತು ಯಾವುದೇ ಲಿಖಿತ ಮಾಹಿತಿ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿಲ್ಲ. ಸಮಿತಿ ಆಡಳಿತ ಮಂಡಳಿಯೊಂದಿಗೆ ರ್ಚಚಿಸಲಾಗುವುದು. ಯಾವುದೇ ಕಾರಣಕ್ಕೂ ಶಿಕ್ಷಕರನ್ನು ಅದಲು ಬದಲು ಮಾಡದಂತೆ, ಈ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.