ಹುಲಸೂರು: ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಹಾಗೂ ಸಾರ್ಥಕ ಜೀವನ ರೂಪಿಸಿಕೊಳ್ಳಲು ಶರಣರ ವಚನಗಳು ಪೂರಕವಾಗಿವೆ ಎಂದು ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಗುರುವಾರ ರಾತ್ರಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಜೀವನ ರೂಪಿಸಿಕೊಳ್ಳುವ ಶಕ್ತಿ ದೇವರು ನಮ್ಮ ಕೈಯಲ್ಲಿ ನೀಡಿದ್ದಾನೆ. ಅಶುದ್ಧತೆ ಕಡೆಗೆ ಗಮನ ಕೊಡದೆ ಶುದ್ಧ ಕಾಯಕ ಮಾಡಿದವರು ಶುದ್ಧನಾಗುತ್ತಾರೆ. ಜೀವನ ಸುಧಾರಿಸಬೇಕಾದರೆ ಶರಣರ ಒಂದು ವಚನ ಪರಿಪೂರ್ಣವಾಗಿ ತಿಳಿದು ನಡೆದರೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಲಿಂಗಧಾರಣೆಯನ್ನು ಮಾಡಿಕೊಳ್ಳಬೇಕು. ನಮ್ಮ ಶ್ರೀಮಠದಿಂದ ಉಚಿತ ಲಿಂಗ ನೀಡಲಾಗುತ್ತಿದ್ದು, ಎಲ್ಲರೂ ಪಡೆದುಕೊಳ್ಳಬೇಕು. ಧರ್ಮದ ಕಾರ್ಯದಲ್ಲಿ ತೊಡಗಿಸಿಕೊಂಡರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಹೇಳಿದರು.
ಪ್ರವಚನಕಾರ, ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಮಾತನಾಡಿದರು.
ತಹಸೀಲ್ದಾರ್ ಶಿವಾನಂದ ಮೇತ್ರೆ, ಜಿಪಂ ಮಾಜಿ ಸದಸ್ಯ ಸುಧೀರ ಕಾಡದಿ, ಶಿವಲಿಂಗಯ್ಯ ಕನಾಡೆ, ಬಾಬುರಾವ ಗೌಂಡಗಾವೆ, ಚಂದ್ರಶೇಖರ ತೊಗರಿಗೆ, ಗದಗಯ್ಯ ಮಠಪತಿ ಇತರರಿದ್ದರು. ಪ್ರೇಮಕುಮಾರ ಗೌಂಡಗಾವೆ ಹಾಗೂ ವೀರೇಶ ಮಠಪತಿ ಸಂಗೀತ ಸೇವೆ ಸಲ್ಲಿಸಿದರು. ರಾಜಕುಮಾರ ತೊಂಡಾರೆ ಸ್ವಾಗತಿಸಿ ನಿರೂಪಣೆ ಮಾಡಿದರು.