ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಸ್ಥಳೀಯವಾಗಿ ಬೆಳೆಯುತ್ತಿರುವ ಬೆಳ್ಳುಳ್ಳಿಗೆ ಭಾರಿ ಡಿಮಾಂಡ್ ಬಂದಿದೆ. ನಗರದ ಎಪಿಎಂಸಿ ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕವಾಗುತ್ತಿದ್ದು, 1 ಕ್ವಿಂಟಾಲ್ಗೆ 30 ಸಾವಿರ ರೂ.ವರೆಗೂ ಬೆಲೆ ದೊರೆತಿದೆ.
ಸ್ಥಳೀಯ ಎಪಿಎಂಸಿಯಲ್ಲಿ ಪ್ರತಿ ಭಾನುವಾರ ಹಾಗೂ ಗುರುವಾರ ಬೆಳ್ಳುಳ್ಳಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ದಪ್ಪ ಬೆಳ್ಳುಳ್ಳಿ ಒಂದು ಕ್ವಿಂಟಾಲ್ಗೆ 25 ಸಾವಿರ ರೂ.ನಿಂದ 30 ಸಾವಿರ ರೂ. ವರೆಗೆ ಮಾರಾಟವಾಗಿದೆ. ಸಣ್ಣ ಬೆಳ್ಳುಳ್ಳಿಗೆ 23 ಸಾವಿರ ರೂ. ವರೆಗೆ ಬೆಲೆಯಿದೆ. ಪ್ರತಿ ವಾರ 100 ಕ್ವಿಂಟಾಲ್ನಷ್ಟು ಬೆಳ್ಳುಳ್ಳಿ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.
2019ರ ಬೆಲೆಯೇ ಅಧಿಕ
2019ರಲ್ಲಿ ಅತಿವೃಷ್ಟಿ ಉಂಟಾದ ಕಾರಣ ಬೆಳ್ಳುಳ್ಳಿಗೆ ಭಾರಿ ಬೇಡಿಕೆ ಉಂಟಾಗಿ 1 ಕ್ವಿಂಟಾಲ್ಗೆ 23 ಸಾವಿರ ರೂ.ವರೆಗೂ ಬೆಲೆ ದೊರೆತ್ತಿತ್ತು. ಇದಾದ ಬಳಿಕ ಇಷ್ಟೊಂದು ಬೆಲೆ ಬಂದಿರಲಿಲ್ಲ. ಅಲ್ಲದೆ, ಕಳೆದ ಎರಡ್ಮೂರು ವಾರದ ಹಿಂದೆ ಒಂದು ಕ್ವಿಂಟಾಲ್ ದಪ್ಪ ಬೆಳ್ಳುಳ್ಳಿ 15 ಸಾವಿರ ರೂ. ನಿಂದ 16 ಸಾವಿರ ರೂ. ವರೆಗೆ ಮಾರಾಟವಾಗಿತ್ತು. ಆದರೀಗ ಬೆಳ್ಳುಳ್ಳಿ ಖರೀದಿಸಲು ದೂರದ ಬಳ್ಳಾರಿ, ಶಿವಮೊಗ್ಗ, ಕೊಪ್ಪಳ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ ಜಿಲ್ಲೆಗಳಿಂದ ವ್ಯಾಪಾರಸ್ಥರು ಬರುತ್ತಿರುವ ಕಾರಣ ಕ್ವಿಂಟಾಲ್ಗೆ 30 ಸಾವಿರ ರೂ.ವರೆಗೂ ಮಾರಾಟವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ಬೆಳ್ಳುಳ್ಳಿ ಬೆಲೆ ಎಪಿಎಂಸಿ ಮಾರುಕಟ್ಟೆಯಲ್ಲಿಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 350 ರೂ.ಗೆ ಒಂದು ಕೆ.ಜಿ.ಯಂತೆ ಮಾರಾಟ ಮಾಡಲಾಗುತ್ತಿದೆ.
ಅಳಿದುಳಿದ ಬೆಳ್ಳುಳ್ಳಿ ವರದಾನ
ಈ ಬಾರಿ ಮಳೆ ಕೊರತೆಯಿಂದ ಬಹುತೇಕ ರೈತರ ಬೆಳ್ಳುಳ್ಳಿ ಸರಿಯಾಗಿ ಬೆಳೆದಿಲ್ಲ. ನೀರಾವರಿ ಹಾಗೂ ಟ್ರ್ಯಾಕ್ಟರ್ ಮೂಲಕ ನೀರು ಹಾಯಿಸಿ ಬೆಳೆಸಿದ ಬೆಳೆ ಅಲ್ಪಸ್ವಲ್ಪ ರೈತರ ಕೈಗೆ ದೊರೆತಿದೆ. ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ ಹಾಗೂ ಗುತ್ತಲ ಭಾಗದ ರೈತರು ಅಲ್ಪಸ್ವಲ್ಪವಾಗಿ ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ರಕ್ಷಿಸಿ ಗೋದಾಮು, ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅಂಥ ರೈತರು ಇದೀಗ ಮಾರುಕಟ್ಟೆಗೆ ಉತ್ಪನ್ನಗಳನ್ನು ತರುತ್ತಿದ್ದಾರೆ.
ಈ ಬಾರಿ ಮಳೆ ಕೊರತೆಯಿಂದ ಬೆಳೆ ಬಂದಿಲ್ಲ. ಬೆಳ್ಳುಳ್ಳಿ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಬೆಲೆಯಲ್ಲಿ ಏರಿಕೆಯಾಗಿದೆ. ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ.
| ಪರಮೇಶ ನಾಯ್ಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ
ಮಳೆ ಕೊರತೆ ನಡುವೆಯೂ ಬೆಳ್ಳುಳ್ಳಿ ಬೆಳೆಯನ್ನು ಸಂರಕ್ಷಿಸಿಟ್ಟಿದ್ದೆವು. 2019ರಲ್ಲಿ 1 ಕ್ವಿಂಟಾಲ್ಗೆ 23 ಸಾವಿರ ರೂ.ವರೆಗೂ ಬೆಲೆ ಬಂದಿತ್ತು. ಕಳೆದ ಎರಡ್ಮೂರು ವಾರದ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ಅಷ್ಟೊಂದು ಬೆಲೆ ಇರಲಿಲ್ಲ. ಸದ್ಯ 30 ಸಾವಿರ ರೂ. ಬೆಲೆಯಿದೆ. ಆದ್ದರಿಂದ ಮಾರಾಟ ಮಾಡುತ್ತಿದ್ದೇವೆ.
| ದಿಳ್ಳೆಪ್ಪ ಕಂಬಳಿ, ರೈತ