ಸುಗುಣೇಂದ್ರ ತೀರ್ಥ ಶ್ರೀಪಾದರ ಕಳವಳ
ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಮಧುಮೇಹ ಕಾಯಿಲೆ ಇದೆಯೆಂದರೆ ಆತ ಬಹುದೊಡ್ಡ ಶ್ರೀಮಂತ ಎಂಬ ಭಾವನೆ ಈ ಹಿಂದೆ ಇತ್ತು. ತನಗೆ ಡಯಾಬಿಟೀಸ್ ಇದೆಯೆಂದು ಶ್ರೀಮಂತರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೀಗ ಈ ಕಾಯಿಲೆ ಸರ್ವವ್ಯಾಪಿ ಆವರಿಸಿದೆ. ಚಿಕ್ಕ ಮಕ್ಕಳಿಗೂ ಅಂಟಿಕೊಳ್ಳುತ್ತಿದೆ. ಈ ರೋಗ ಇಲ್ಲದವರನ್ನು ಸನ್ಮಾನಿಸುವ ಸ್ಥಿತಿ ಬಂದಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಕಳವಳ ವ್ಯಕ್ತಪಡಿಸಿದರು.
ಉಡುಪಿಯ ರಾಜಾಂಗಣದಲ್ಲಿ ಬಡಗುಬೆಟ್ಟು ಕ್ರೆಡಿಟ್ ಕೋ-ಆಪ್ ಸೊಸೈಟಿ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಉಡುಪಿ ಜಿಲ್ಲೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ, ಇಂತಹ ಆರೋಗ್ಯ ತಪಾಸಣಾ ಶಿಬಿರಗಳ ಅಗತ್ಯತೆ ಹೆಚ್ಚಿದೆ ಎಂದು ಆಶೀರ್ವಚನ ನೀಡಿದರು.
ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಬಡಗುಬೆಟ್ಟು ಸೊಸೈಟಿಯ ಮುಖ್ಯಸ್ಥ ಜಯಕರ್ ಶೆಟ್ಟಿ ಇಂದ್ರಾಳಿ ಫಲಪುಷ್ಪ ಸಮರ್ಪಣೆ ಮಾಡಿದರು.
ಮೆಡಿಕಲ್ ಅಸೋಸಿಯೇಷನ್ನ ಉಡುಪಿ ಅಧ್ಯಕ್ಷ ಸುರೇಶ್ ಶೆಣೈ, ಡಾ. ಅರ್ಚನಾ ಭಕ್ತ, ಡಾ. ಶರತ್ಚಂದ್ರ, ಡಾ. ಶಬರಿ, ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರು, ಬಡಗುಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್, ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಸುಮನಾ ಶೇಖರ್, ಡಾ. ಲಾವಣ್ಯಾ, ರಾಘವೇಂದ್ರ ಪ್ರಭು ಕರ್ವಾಲು, ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ರಮಣ ಆಚಾರ್ಯ ಇತರರಿದ್ದರು.
ರತ್ನಾಕರ್ ಶೆಟ್ಟಿಗಾರ್ ಇಂದ್ರಾಳಿ ಕಾರ್ಯಕ್ರಮ ನಿರ್ವಹಿಸಿದರು.
ಕೆಎಂಸಿ ಮಣಿಪಾಲ್, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಮಹಿಳಾ ವೈದ್ಯರ ಘಟಕ, ಇಂಡಿಯನ್ ಡೆಂಟಲ್ ಅಸೋಸಿಯೇಷನ್. ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಹಾಗೂ ಉಡುಪಿಯ ಎಲ್ಲ ತಜ್ಞವೈದ್ಯರ ಸಮ್ಮಿಲನದಲ್ಲಿ ಶಿಬಿರ ನಡೆಯಿತು. ನೂರಾರು ಜನರು ಶಿಬಿರದ ಪ್ರಯೋಜನ ಪಡೆದರು.
ಭಗವದ್ಗೀತೆ ಬರೆದರೆ, ಪಠಿಸಿದರೆ ಸಕಲ ರೋಗ ನಿವಾರಣೆ ಸಾಧ್ಯವಿದೆ. ಕಾಯಿಲೆ ವಾಸಿಯಾಗಲು ವೈದ್ಯರು ಔಷಧ ಕೊಟ್ಟರೆ, ಭಗವಂತನು ಭಗವದ್ಗೀತೆಯೆಂಬ ಆಧ್ಯಾತ್ಮಿಕ ಚಿಕಿತ್ಸೆ ನೀಡಿದ್ದಾನೆ. ರೋಗಿಗಳಿಗೆ ವೈದ್ಯರ ಮೇಲೆ ಅಪಾರ ನಂಬಿಕೆ ಇರುವುದರಿಂದ ತಮ್ಮ ಬಳಿ ಬರುವವರಿಗೆ ಭಗವದ್ಗೀತೆ ಪಠಿಸುವಂತೆ, ಬರೆಯುವಂತೆ ಪ್ರೇರೇಪಿಸಬೇಕು.
| ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ